ಕೊಣಾಜೆ: 22ನೇ ವರ್ಷದ ಕೊಣಾಜೆ ಶಾರದೋತ್ಸವಕ್ಕೆ ಗಣಹೋಮ ಹಾಗೂ ಧ್ವಜಾರೋಹಣದೊಂದಿಗೆ ಸಂಭ್ರಮದ ಚಾಲನೆ ದೊರೆಯಿತು.

ಸಪ್ತಸ್ವರ ಕಲಾ ತಂಡ (ರಿ.) ಕೊಣಾಜೆ, ಸಪ್ತಸ್ವರ ಕಲಾ ತಂಡ ಸೇವಾ ಟ್ರಸ್ಟ್ (ರಿ.) ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶಾರದಾ ನಗರ ಕೊಣಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಉತ್ಸವ ನಡೆಯುತ್ತಿದೆ.

ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ಲೆಕ್ಕ ಪರಿಶೋಧಕರಾದ ಸುರೇಂದ್ರ ರೈ, ಗ್ರಾಮಚಾವಡಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಾರದೋತ್ಸವವು ಧಾರ್ಮಿಕ ಆಚರಣೆಯಷ್ಟೇ ಅಲ್ಲ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದರು.
ನಾವು ಹಾರಿಸಿದ ಧ್ವಜವು ಭಕ್ತಿ, ಏಕತೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯರು ಹಾಗೂ ಗೌರವ ಸಲಹೆಗಾರರಾದ ರವೀಂದ್ರ ರೈ ಹರೇಕಳ ಅವರು, ಕೊಣಾಜೆ ಪರಿಸರದ ಜನರು ಒಗ್ಗಟ್ಟಿನಿಂದ ಹಲವು ವರ್ಷಗಳಿಂದ ಶಾರದೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಮುಂದಿನ ವರ್ಷಗಳಲ್ಲಿಯೂ ಇದೇ ಒಗ್ಗಟ್ಟು ಹಾಗೂ ವಿಜೃಂಭಣೆಯಿಂದ ಉತ್ಸವ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕೊಣಾಜೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಕತೆಯ ಸಂಕೇತವಾಗಿ ಬೆಳೆದುಬಂದಿರುವ ಶಾರದೋತ್ಸವವು ಸ್ಥಳೀಯರ ಸಹಕಾರ, ಸಂಘಟಕರ ಪರಿಶ್ರಮ ಮತ್ತು ಭಕ್ತರ ಶ್ರದ್ಧೆಗೆ ಸಾಕ್ಷಿಯಾಗಿದೆ. ಇಂತಹ ಉತ್ಸವಗಳು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಕಾರ್ಯಕ್ರಮದಲ್ಲಿ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಹೊಸಮನೆ, ಸಮಿತಿಯ ಸರ್ವ ಪದಾಧಿಕಾರಿಗಳು, ಸಪ್ತಸ್ವರ ಕಲಾ ತಂಡ ಹಾಗೂ ಸಪ್ತಸ್ವರ ಕಲಾ ತಂಡ ಸೇವಾ ಟ್ರಸ್ಟ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಭುವನೇಶ್ವರಿ ಮಾತೃ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

