ಕೊಣಾಜೆ: ಮಹಾತ್ಮಾ ಗಾಂಧಿಯವರು ಇಡೀ ದೇಶವನ್ನು ಒಗ್ಗೂಡಿಸಿದ ಮಹಾತ್ಮ ರಾಗಿದ್ದಾರೆ. ಟಿವಿ, ಚಾನೆಲ್ , ಪತ್ರಿಕೆಗಳು, ಇನ್ಸ್ಟ್ರಾಗ್ರಾಂ ಇಲ್ಲದ ಕಾಲದಲ್ಲೇ ಗಾಂಧೀಜಿಯವರು ಅವರ ಅಹಿಂಸಾತ್ಮಕ ನಡೆ, ಮೇಲ್ದರ್ಜೆಯ ನೈಜ ಚಿಂತನೆಯ ಮೂಲಕವೇ ಜನಾಭಿಮಾನದೊಂದಿಗೆ ಪ್ರಸಿದ್ದಿಯಾಗಿದ್ದರು. ಅವರ ಸತ್ಯವೇ, ಸತ್ಯಾನ್ವಾಷಣೆಯೇ ಅವರಲ್ಲಿ ಶಕ್ತಿಯಾಗಿ ರೂಪುಗೊಂಡಿತ್ತು ಎಂದು ಮುಖ್ಯಮಂತ್ರಿಗಳ ಸಂವಹನ ಸಲಹೆಗಾರರಾದ ದೀಪಕ್ ತಿಮ್ಮಯ್ಯ ಅವರು ಹೇಳಿದರು.

ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜಿತ “ಗಾಂಧಿ ವಿಚಾರಧಾರೆ” ಕುರಿತು ವಿಶೇಷ ಉಪನ್ಯಾಸ ಹಾಗೂ ಗಾಂಧಿ ಮಂಥನ ವೇದಿಕೆ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅವರ ಜೀವನದ ಬಗ್ಗೆ ಎಷ್ಟು ಟೀಕೆ ಮಾಡಿದರೂ, ಭಾರತದ ಇತಿಹಾಸದಲ್ಲಿ ಅವರ ಸ್ಥಾನವನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಕೊಡುಗೆಗಳನ್ನು ಗುರುತಿಸುವುದರ ಜೊತೆಗೆ, ಗಾಂಧೀಜಿಯವರ ಕೊಡುಗೆಯನ್ನೂ ಅದರ ಐತಿಹಾಸಿಕ ಹಿನ್ನೆಲೆಯೊಂದಿಗೆ ಅರ್ಥಮಾಡಿಕೊಳ್ಳಬೇಕು.
ಗಾಂಧೀಜಿಯನ್ನು ಪೂಜಿಸಬೇಕೆಂದೇನಿಲ್ಲ. ಅವರನ್ನು ಟೀಕಿಸಬಾರದೆಂದೂ ಅಲ್ಲ. ಆದರೆ ಟೀಕಿಸುವ ಮೊದಲು ಅರ್ಥಮಾಡಿಕೊಳ್ಳಬೇಕು; ವಿರೋಧಿಸುವ ಮೊದಲು ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇತಿಹಾಸವನ್ನು ಅಳಿಸುವುದರಿಂದ ಇತಿಹಾಸ ಬದಲಾಗುವುದಿಲ್ಲ. ಅದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದರಿಂದ ಮಾತ್ರ ನಮ್ಮ ಸಮಾಜ ಹೆಚ್ಚು ಪ್ರಬುದ್ಧವಾಗುತ್ತದೆ. ಮಹಾತ್ಮ ಗಾಂಧೀಜಿಯನ್ನು ಮರೆತರೆ, ನಾವು ಆಂತರಿಕ ಶಕ್ತಿಯನ್ನು ಕಳೆದುಕೊಂಡಂತೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗಾಂಧೀಜಿಯವರನ್ನು ಕೇವಲ ಒಂದು ದೃಷ್ಟಿಕೋನದಿಂದ ಕಾಣಲು ಸಾಧ್ಯವಿಲ್ಲ. ಗಾಂಧೀಜಿವರು ಸೇರಿದಂತೆ ಅನೇಕ ವಿಚಾರಧಾರೆಗಳು ಚರ್ಚಿಸಲು ಕ್ಯಾಂಪಸ್ ನಲ್ಲಿ ಒಂದು ಚಿಂತನ ಮಂಥನ ವೇದಿಕೆಯ ಅಗತ್ಯವಿತ್ತು. ಇದೀಗ ಈ ಕನಸು ನನಸಾಗಿದೆ ಎಂದರು.
ಮಂಗಳೂರು ವಿವಿ ಕುಲಸಚಿವರಾದ ಸಂತೋಷ್ ಬಿ ಜಗಲಸಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೆಂದ್ರಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಡಾ.ಮೋಹನ್ ಸಿಂಘೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಪ್ರೊ.ಶೇಖರ್ ಅವರು ಸ್ವಾಗತಿಸಿದರು. ಡಾ.ಧನಂಜಯ ಕುಂಬ್ಳೆ ಅವರು ನಿರೂಪಿಸಿದರು. ಡಾ.ಮೋಹನ್ ಸಿಂಘೆ ವಂದಿಸಿದರು.
ಮಂಗಳೂರು ವಿವಿ ಆವರಣದಲ್ಲಿ “ಗಾಂಧಿ ಮಂಥನ ವೇದಿಕೆ” ಲೋಕಾರ್ಪಣೆಗೊಂಡಿದೆ. ಕುಲಪತಿಗಳ ಕನಸಿನಂತೆ ಅನೇಕ ಮೌಲಿಕ ಚಿಂತನೆಗಳಿಗೆ, ವಿಚಾರಗಳಿಗೆ, ಅರ್ಥಪೂರ್ಣ ಚರ್ಚೆಗಳಿಗೆ ಅನುಕೂಲವಾಗುವಂತೆ ಗೋಡೆಗಳಿಲ್ಲದೆ ಬಾಗಿಲುಗಳಿಲ್ಲದ ವಿಚಾರ ವೇದಿಕೆಯನ್ನು ರೂಪಿಸಲಾಗಿದ್ದು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು , ಸಿಬ್ಬಂದಿಗಳು ಇಲ್ಲಿ ಮೌಲಿಕ ವಿಚಾರಧಾರೆಗಳನ್ನು ಚರ್ಚಿಸಲಿದ್ದಾರೆ.
ಸಂತೋಷ್ ಬಿ ಜಗಲಸಾರ
ಕುಲಸಚಿವರು, ಮಂಗಳೂರು ವಿವಿ

