ಉಳ್ಳಾಲ; ಮೊಗವೀರಪಟ್ಟಣ-ಕೋಟೆಪುರ ಮುಖ್ಯ ರಸ್ತೆಯ ದುರಸ್ತಿಗೆ ಆಗ್ರಹಿಸಿ ಸೆ.19ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲು ಮೊಗವೀರಪಟ್ಟಣ-ಕೋಟೆಪುರ ನಾಗರಿಕ ಹೋರಾಟ ಸಮಿತಿ ಮುಂದಾಗಿದ್ದು, ಪ್ರತಿಭಟನೆಗೆ ಅನುಮತಿ ನೀಡುವಂತೆ ಎಸಿಪಿಗೆ ಮನವಿ ಸಲ್ಲಿಸಿದೆ.


ಮೊಗವೀರಪಟ್ಟಣದಿಂದ ಕೋಟೆಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ. ಈ ಹಿನ್ನೆಲೆಯಲ್ಲಿ ರಸ್ತೆಯ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ ಎಂದು ಸಮಿತಿ ಆರೋಪಿಸಿದೆ.

ರಸ್ತೆಯ ದುಸ್ಥಿತಿಯಿಂದಾಗಿ ದಿನನಿತ್ಯ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಿದ್ಯಾರ್ಥಿಗಳು, ಮಹಿಳೆಯರು, ಮೀನುಗಾರರು ಸೇರಿದಂತೆ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಸಮಸ್ಯೆ ಮುಂದುವರಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಸೆ.19ರಂದು ಮೊಗವೀರಪಟ್ಟಣ ಸಿ ರೋಡ್ ಕೋಟೆಪುರದಲ್ಲಿ ಶಾಂತಿಯುತವಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅಗತ್ಯ ಅನುಮತಿ ನೀಡುವಂತೆ ಎಸಿಪಿಗೆ ಸಲ್ಲಿಸಿರುವ ಮನವಿಯಲ್ಲಿ ಸಮಿತಿ ಕೋರಿದೆ.
ಪ್ರಜಾಪ್ರಭುತ್ವದ ರೀತಿಯಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆಯನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸುವುದಾಗಿ ಸಮಿತಿ ಭರವಸೆ ನೀಡಿದೆ.


