ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಡಿಕ್ಕಿಯಾಗಿ ಪತಿ, ಪತ್ನಿ ಹಾಗೂ ಪುತ್ರಿ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಮೃತಪಟ್ಟವರು ಮೂಲತಃ ಕೊಪ್ಪ ಗ್ರಾಮದ, ಪ್ರಸಕ್ತ ಬೆಂಗಳೂರು ನಿವಾಸಿಗಳಾದ ಮುತ್ತುರಾಜು (35), ಪತ್ನಿ ಕಾವ್ಯಾ (35) ಹಾಗೂ ಪುತ್ರಿ ಕೀರ್ತನಾ (8) ಎಂದು ತಿಳಿದು ಬಂದಿದೆ. ದಂಪತಿಯ ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.
ಗಣೇಶ ಚತುರ್ಥಿ ಪ್ರಯುಕ್ತ ಮುತ್ತುರಾಜು ಅವರು ಪತ್ನಿ ಮಕ್ಕಳೊಂದಿಗೆ ಸ್ವಗ್ರಾಮ ಕೊಪ್ಪಕ್ಕೆ ಆಗಮಿಸಿದ್ದರು. ಹಬ್ಬವನ್ನು ಮುಗಿಸಿಕೊಂಡು ಮಂಗಳವಾರ ಮುಂಜಾನೆ ಸ್ಕೂಟರ್ ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ಬಳಿಕ ಟ್ಯಾಂಕರ್ ಅನ್ನು ಅದರ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ತಂದೆ-ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗಳು ಕೀರ್ತನಾ ಮಂಡ್ಯ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಇನ್ನೊಂದು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕೊಪ್ಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.



