ಕುಮಟಾ: ಐಷಾರಾಮಿ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ಮಲಗಿದ್ದ ದನವನ್ನು ಕದ್ದು ಪರಾರಿಯಾಗಿದ್ದ ಮೂವರನ್ನು ಕುಮಟಾ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಸೆ.10ರಂದು ಕುಮಟಾದ ರೈಸ್ ಮಿಲ್ ಸಮೀಪ ರಸ್ತೆ ಬದಿಯಲ್ಲಿ ದನವೊಂದು ಮಲಗಿದ್ದ ವೇಳೆ, ಮಂಗಳೂರಿನಿಂದ ಕಾರಿನಲ್ಲಿ ಬಂದ ಮೂವರು ನಸುಕಿನ ಸುಮಾರು 2 ಗಂಟೆಗೆ ದನವನ್ನು ಅಪಹರಿಸಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬಗ್ಗೋಣದ ನಾಗೇಶ ಲಕ್ಷಣ ನಾಯಕ ಅವರು ಕುಮಟಾ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್ ಠಾಣೆಯ ಪಿಐ ಯೋಗೇಶ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಸುಮಾರು 60 ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಬಿಳಿ ಬಣ್ಣದ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಆರೋಪಿಗಳು ಬಂದಿರುವುದು ಪತ್ತೆಯಾಯಿತು. ಪಿಎಸ್ಐ ಖಾದರ್ ಭಾಷಾ, ರವಿ ಗುಡ್ಡಿ ಹಾಗೂ ವಿಠ್ಠಲ ಮಡವಲಕರ್ ಅವರು ಕಾರಿನ ಸುಳಿವು ಪತ್ತೆಹಚ್ಚಿದರು.
ನಂತರ ಪೊಲೀಸ್ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ ಹಾಗೂ ಕಿರಣ ನಾಯ್ಕ ಅವರು ಕಾರಿನ ಜಾಡು ಹಿಡಿದು ಶೋಧ ನಡೆಸಿದರು. ಮಂಗಳೂರು ಬೈಕಂಪಾಡಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಪ್ರಸ್ತುತ ಬಜಪೆಯ ಜರಿಯಲ್ಲಿ ವಾಸಿಸುತ್ತಿದ್ದ ಮಹಮದ್ ಶಬ್ಬೀರ್ ಎಂಬಾತನನ್ನು ಬಂಧಿಸಲಾಯಿತು.
ವಿಚಾರಣೆ ವೇಳೆ ಮಹಮದ್ ಶಬ್ಬೀರ್, ಉಡುಪಿ ಕಾಪುವಿನ ಮಹಮದ್ ಆಜೀಪ್ ಹಾಗೂ ಮಂಗಳೂರು ಉಳ್ಳಾಲದ ಜುಲ್ಪಾನ್ ಮಾಲಿಕ್ ಅವರೊಂದಿಗೆ ಸೇರಿ ಜಾನುವಾರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕಾರ್ಯಾಚರಣೆಗೆ ಉಡುಪಿ ಪೊಲೀಸರು ಸಹಕಾರ ನೀಡಿದ್ದು, ಯಶಸ್ವಿ ತನಿಖೆ ನಡೆಸಿದ ಪೊಲೀಸ್ ತಂಡವನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ರಾನು ಗುಪ್ತ ಅವರು ಶ್ಲಾಘಿಸಿದ್ದಾರೆ.

