


ಹರೇಕಳ: ಹರೇಕಳ ಗ್ರಾಮದ ಒಡ್ಡೆದಗುಳಿ ಆರ್.ಜಿ. ನಗರ 2ನೇ ಕ್ರಾಸ್‌ನ ಸರ್ವೇ ನಂ.106/12ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಯ ಅಂಚಿನಲ್ಲಿ ಕಾಂಪೌಂಡ್ ಗೋಡೆ ಹಾಗೂ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರಸ್ತೆ, ಚರಂಡಿ ಹಾಗೂ ಕಾಲುದಾರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಹರೇಕಳ ಗ್ರಾಮದ ಸಾರ್ವಜನಿಕರು ಹರೇಕಳ ಗ್ರಾಮ ಪಂಚಾಯತ್‌ಗೆ ಸಾರ್ವಜನಿಕ ದೂರು ಸಲ್ಲಿಸಿ, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕರ ಆರೋಪದ ಪ್ರಕಾರ, ರಸ್ತೆಯ ಅಂಚಿನಲ್ಲಿ ಸಮರ್ಪಕ ಜಾಗ ಬಿಡದೆ ಕಾಂಪೌಂಡ್ ಗೋಡೆ ನಿರ್ಮಿಸಲಾಗುತ್ತಿದೆ. ಅಲ್ಲದೆ, ಮಳೆನೀರು ಹರಿದುಹೋಗಲು ಅಗತ್ಯವಿರುವ ಚರಂಡಿ ವ್ಯವಸ್ಥೆಗೂ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ. ರಸ್ತೆ ಈಗಾಗಲೇ ಕಿರಿದಾಗಿದ್ದು, ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಸೇರಿದಂತೆ ಹೆಚ್ಚಿನ ಕಾಮಗಾರಿ ನಡೆದರೆ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸದರಿ ಪ್ರದೇಶವು ಕಡಿದಾದ ಇಳಿಜಾರನ್ನು ಹೊಂದಿರುವುದರಿಂದ ರಸ್ತೆ ಬದಿಯಲ್ಲಿ ಮಣ್ಣು ಅಗೆಯುವಿಕೆ ಹಾಗೂ ನಿರ್ಮಾಣ ಕಾಮಗಾರಿಯಿಂದ ಇಳಿಜಾರು ಸ್ಥಿರತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ರಸ್ತೆಯ ಎದುರು ಬದಿಯಲ್ಲಿಯೂ ರಸ್ತೆ ಅಂಚಿನಲ್ಲಿ ಮನೆ ನಿರ್ಮಾಣವಾಗಿದ್ದು, ಕಾಲುದಾರಿ ಹಾಗೂ ಮಳೆನೀರಿನ ಚರಂಡಿಗೆ ತಡೆ ಉಂಟಾಗಿದೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಕಾಂಪೌಂಡ್ ಗೋಡೆ ಹಾಗೂ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಪಂಚಾಯತ್ ಅನುಮತಿ, ಕಟ್ಟಡ ಪರವಾನಗಿ ಹಾಗೂ ಇತರ ಕಾನೂನುಬದ್ಧ ಅನುಮತಿಗಳನ್ನು ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಾರ್ವಜನಿಕರು ಪಂಚಾಯತ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅಲ್ಲದೆ, ರಸ್ತೆ ಮತ್ತು ಜಮೀನಿನ ಗಡಿಯನ್ನು ಅಧಿಕೃತವಾಗಿ ಸರ್ವೇ ನಡೆಸಿ, ರಸ್ತೆ, ಚರಂಡಿ ಹಾಗೂ ಕಾಲುದಾರಿಗೆ ಅಗತ್ಯವಿರುವ ಜಾಗವನ್ನು ಖಚಿತಪಡಿಸಬೇಕು. ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಯುತ್ತಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿದ್ಯುತ್ ಕಂಬವನ್ನು ರಸ್ತೆಯ ಬದಿಗೆ ಸ್ಥಳಾಂತರಿಸುವ ಉದ್ದೇಶವಿದ್ದಲ್ಲಿ, ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅನುಮತಿ ಹಾಗೂ ತಾಂತ್ರಿಕ ಪರಿಶೀಲನೆಯ ನಂತರವೇ ಕ್ರಮ ಕೈಗೊಳ್ಳಬೇಕು. ಇದರಿಂದ ರಸ್ತೆ ಸಂಚಾರಕ್ಕೆ ಅಥವಾ ಸಾರ್ವಜನಿಕರಿಗೆ ಯಾವುದೇ ಅಪಾಯ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

