ಬೆಂಗಳೂರು, ಆಗಸ್ಟ್ 24: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಈರುಳ್ಳಿ ಬೆಲೆ ಏರಿಕೆ ಶಾಕ್ ನೀಡಿದೆ. ನಿತ್ಯದ ಅಡುಗೆಯ ಅವಿಭಾಜ್ಯ ಅಂಗವಾಗಿರುವ ಈರುಳ್ಳಿಯನ್ನು ಕತ್ತರಿಸುವ ಮೊದಲೇ ಅದರ ದುಬಾರಿ ದರ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ಶತಕ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಬೆಲೆ ಏರಿಕೆಗೆ ಕಾರಣವೇನು?
ರಾಜ್ಯದಲ್ಲಿ ಒಂದೆಡೆ ಮುಂಗಾರು ಮಳೆ ಕೊರತೆಯಿಂದ ಬರಗಾಲ ತಾಂಡವವಾಡುತ್ತಿದೆ. ಮಳೆ, ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಮಳೆ ಬಾರದೇ ಈ ಸಲ ಸುಮಾರು ಶೇಕಡಾ 70% ರಷ್ಟು ಈರುಳ್ಳಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆಯಾಗಿದೆ. ಸದ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮತ್ತೊಂದೆಡೆ, ಇಲ್ಲಿಂದ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಈರುಳ್ಳಿ ರಫ್ತಾಗುತ್ತಿದ್ದರೂ, ಹೊರಗಿನಿಂದ ಆಮದು ಸಂಪೂರ್ಣ ಸ್ಥಗಿತಗೊಂಡಿರುವುದು ಬೆಲೆ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.
ಕೆಜಿ ಈರುಳ್ಳಿ ದರ 100 ರೂ ಮುಟ್ಟುವ ಸಾಧ್ಯತೆ
ಪ್ರಸ್ತುತ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ 70 ರಿಂದ 75 ರೂಪಾಯಿವರೆಗೆ ತಲುಪಿದೆ. ಇತ್ತ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲೇ ಕೆಜಿಗೆ 50 ರಿಂದ 60 ರೂ.ದರವಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಮತ್ತು ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 10 ರಿಂದ 20 ರೂಪಾಯಿ ಏರಿಕೆಯಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಬೆಲೆ ಏರಿಕೆಯ ಬಿಸಿ ಮುಂದಿನ ಒಂದು-ಒಂದೂವರೆ ತಿಂಗಳ ಕಾಲ ಮುಂದುವರಿಯಲಿದ್ದು, ಕೆಲವೇ ದಿನಗಳಲ್ಲಿ ಕೆಜಿ ಈರುಳ್ಳಿ ದರ 100 ರೂಪಾಯಿ ಮುಟ್ಟುವ ಸಾಧ್ಯತೆಯಿದೆ.
ಬೆಲೆ ಎಷ್ಟೇ ಆದರೂ ಈರುಳ್ಳಿ ಖರೀದ ಅನಿವಾರ್ಯ: ಗ್ರಾಹಕರು ಅಳಲು
‘ಸಾಮಾನ್ಯ ಈರುಳ್ಳಿಯೇ 50 ರೂಪಾಯಿ ದಾಟಿದೆ. ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಮಾಡಲು ಸಾಧ್ಯವಿಲ್ಲ, ಎಷ್ಟೇ ಬೆಲೆಯಾದರೂ ಅನಿವಾರ್ಯವಾಗಿ ಖರೀದಿಸಲೇಬೇಕಿದೆ’ ಎಂದು ಮಧ್ಯಮ ವರ್ಗದ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಈ ಹಿಂದಿನಂತೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೂಲಕ ರಿಯಾಯಿತಿ ದರದಲ್ಲಿ ಜನರಿಗೆ ಈರುಳ್ಳಿ ಒದಗಿಸಬೇಕು ಎಂಬುದು ಸಾರ್ವಜನಿಕರ ಪ್ರಬಲ ಆಗ್ರಹವಾಗಿದೆ.

