ಮಂಗಳೂರು:ತೀಯಾ ಸೇವಾ ಸಹಕಾರ ಸಂಘ (ನಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಗಸ್ಟ್ 23ರಂದು ಜೆಪ್ಪುವಿನ ಮಾರ್ಷ್ ಗಾರ್ಡನ್ನಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ದಿನೇಶ್ ಕುಮಾರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ರಲ್ಲಿ ಆರಂಭಗೊಂಡ ತೀಯಾ ಸೇವಾ ಸಹಕಾರ ಸಂಘವು ತೀಯಾ ಸಮಾಜ ಹಾಗೂ ಹಿಂದುಳಿದ ವರ್ಗದ ಜನರನ್ನು ಒಗ್ಗೂಡಿಸಿ, ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಸ್ಥಾಪನೆಯಾಯಿತು. ಬಳಿಕ ವಿವಿಧ ಸಮಾಜದವರೂ ಸಂಘದೊಂದಿಗೆ ಸೇರ್ಪಡೆಗೊಂಡಿದ್ದು, ಇದೀಗ ಎಲ್ಲರನ್ನೂ ಒಳಗೊಂಡು ಸಂಘ ಮುನ್ನಡೆಯುತ್ತಿದೆ ಎಂದರು.
ಸಂಘದಡಿ ಪ್ರಸ್ತುತ 120 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸದಸ್ಯರಿಗೆ ಉತ್ಸಾಹಭರಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ವಾರ್ಷಿಕ ಮಹಾಸಭೆಯ ದಿನವೇ ದಶಮಾನೋತ್ಸವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆಗಸ್ಟ್ 23ರಂದು ಬೆಳಗ್ಗೆ 9 ಗಂಟೆಗೆ ಮಹಾಸಭೆ ನಡೆಯಲಿದ್ದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಐವನ್ ಡಿಸೋಜ, ಮಿಥುನ್ ರೈ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಹಕಾರ ಕ್ಷೇತ್ರದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ದಿನೇಶ್ ಕುಮಾರ್ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ನೋಂದಣಿ ಶಿಬಿರವನ್ನೂ ವಿಶೇಷವಾಗಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಸುನೀಲ್ ಜೆ. ಉಚ್ಚಿಲ್, ಯಶವಂತಿ ಜೆ. ಉಚ್ಚಿಲ್, ಅಭಿಜಿತ್ ಬೆಳ್ಚಡ ಹಾಗೂ ಸೂರಜ್ ಕುಮಾರ್ ಉಪಸ್ಥಿತರಿದ್ದರು.

