ಉಳ್ಳಾಲ: ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಪ್ರಸ್ತುತ 16ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪಜೀರ್ ಫ್ರೆಂಡ್ಸ್ ಸರ್ಕಲ್ ಪಜೀರು ಅಡ್ಕ ವತಿಯಿಂದ ಇಲ್ಲಿನ ಸ್ಥಳೀಯ ಅಂಗನವಾಡಿಗೆ ನಿರ್ಮಿಸಲಾದ ಧ್ವಜಕಂಬವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಹಸ್ತಾಂತರಿಸಲಾಯಿತು.

ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಪ್ರಧಾನ ಪಾತ್ರಿ ಸುಬ್ರಾಯ ಪೂಜಾರಿ ಭಂಡಾರ ಮನೆ ಧ್ವಜಕಟ್ಟೆ ಉದ್ಘಾಟಿಸಿದರು. ಪಜೀರ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ವಿಜಯ ಧ್ವಜಾರೋಹಣ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಸಂಜಿತ್, ಕೋಶಾಧಿಕಾರಿ ಪ್ರಶಾಂತ್, ಸ್ಥಳೀಯರಾದ ರವಿ ರೈ ಪಜೀರು, ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಸುಗಂಧಿ ಸಹಕರಿಸಿದರು.
ಪಜೀರು ಫ್ರೆಂಡ್ಸ್ ಸರ್ಕಲ್ 2010ರಲ್ಲಿ ಸ್ಥಾಪನೆಯಾಗಿ ಪರಿಸರದಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಘದ ಸೇವಾ ಮನೋಭಾವದ ಅಂಗವಾಗಿ ಪಜೀರು ಅಡ್ಕ ಇಲ್ಲಿನ ಅಂಗನವಾಡಿಗೆ ಅಗತ್ಯವಿದ್ದ ಧ್ವಜಕಂಬವನ್ನು ಸಂಘದ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಜೀರು ಫ್ರೆಂಡ್ಸ್ ಹಮ್ಮಿಕೊಂಡ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

