



ಮಾಡೂರು : ಮಾಡೂರು ಸರಕಾರಿ ಶಾಲೆಯಲ್ಲಿ ೮೦ ನೇ ಸ್ವಾತಂತ್ರೋತ್ಸವ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ಧ್ವಜಾರೋಹಣ ಬಳಿಕ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಹಾಗೂ ಪೋಷಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಆಟಿಡೊಂಜಿ ಕೂಟ ಕಾರ್ಯಕ್ರಮದ ಮೂಲಕ ಮನೆಯಲ್ಲಿ ತಯಾರಿಸಿದ ಆಷಾಢ ಮಾಸದ ವಿಶಿಷ್ಟ ಖಾದ್ಯಗಳ ಎಲ್ಲರೂ ಜತೆಯಾಗಿ ಸಹಭೋಜನವನ್ನು ನಡೆಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಮಡ್ಯಾರ್ ಧ್ವಜಾರೋಹಣ ನೆರವೇರಿಸಿದರು. ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್ ಸುಜಿತ್ ಮಾಡೂರು ಮಾತನಾಡಿ ಪ್ರತಿಯೊಂದು ಕೆಲಸವನ್ನೂ ದೇಶಪ್ರೇಮದೊಂದಿಗೆ ಆಚರಿಸಬೇಕು. ಹುಟ್ಟುಹಬ್ಬದಂತಹ ವಿಶೇಷ ದಿನಗಳನ್ನು ಗಿಡ ನೆಡುವ ಮೂಲಕ ಆಚರಿಸುವಂತಹ ಚಟುವಟಿಕೆಗಳು ದೇಶಪ್ರೇಮಕ್ಕೆ ಪೂರಕವಾಗಿರಬೇಕು. ಭವ್ಯ ಭಾರತ ನಿರ್ಮಾಣಕ್ಕಾಗಿ ಭಾರತೀಯರೆಲ್ಲರೂ ಒಟ್ಟುಗೂಡಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷರು ರಶೀದ್ ಮಾಡೂರು, ಗೌರವಾಧ್ಯಕ್ಷರು ಅಝೀಝ್ ಮಾಡೂರು, ಪ್ರ.ಕಾ ಪುರುಷೋತ್ತಮ್ ಗಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಝೊಹರಾ, ಸದಸ್ಯೆ ರ್ಝಾನಾ , ಸಿಆರ್ ಪಿ ಸುಜಾತಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಪುಷ್ಪಾ ಸ್ವಾಗತಿಸಿದರು. ಜೀವಿತಾ ನಿರೂಪಿಸಿದರು, ನಿಶಾ ವಂದಿಸಿದರು. ಸ್ವಾತಂತ್ರ್ಯ ದಿನದ ನೈಜ ಕಲ್ಪನೆ ಶಾಲೆಯಲ್ಲಿ ಸಾಕಾರವಾಯಿತು. ಶಾಲಾ ಆವರಣದ ಸ್ವಚ್ಛತೆಯನ್ನು ಎಲ್ಲಾ ಮಕ್ಕಳ ಪೋಷಕರು ಸೌಹಾರ್ದತೆಯಿಂದ ಒಟ್ಟಾಗಿ ನಡೆಸಿದರು. ಪೋಷಕರಿಗಾಗಿ ಏರ್ಪಡಿಸಿದ್ದ ವಿವಿಧ ಆಟಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದರು. ತೆಂಗಿನ ಗರಿ ನೇಯುವ ಕಾರ್ಯದಲ್ಲಿಯೂ ಎಲ್ಲಾ ಧರ್ಮಗಳ ಪೋಷಕರು ಜೊತೆಯಾಗಿ ಪಾಲ್ಗೊಂಡರು. ತಮ್ಮ ತಮ್ಮ ಮನೆಗಳಿಂದ ತಂದಿದ್ದ ವಿವಿಧ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಮೂಲಕ ವಿಭಿನ್ನ ಶೈಲಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.

