ಬ್ರಹ್ಮಾವರ, ಜು. 29 : ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕುಮಟಾದ ನಾಡಾ ಮಸ್ಕೇರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲೀಕ ನಾಗರಾಜ ನಾಯ್ಕ್ ಅವರು ಅಕ್ಕಿಯನ್ನು ಲಾರಿಗೆ ತುಂಬಿಸಿದ್ದರು. ಲಾರಿ ಮಾಲೀಕ ಗಿರೀಶ್ ನಾಯ್ಕ್ ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಈ ಸರ್ಕಾರಿ ಅಕ್ಕಿಯನ್ನು ಕೇರಳದ ಕಾಸರಗೋಡಿನ ಶಾಜಿ ಟ್ರೇಡಿಂಗ್ ಕಂಪನಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಮಣೂರು ಗ್ರಾಮದ ಮಹಾಲಕ್ಷ್ಮಿ ಹೋಟೆಲ್ ಮುಂಭಾಗದಲ್ಲಿ ದಾಳಿ ನಡೆಸಲಾಯಿತು.ಕಾರ್ಯಾಚರಣೆಯಲ್ಲಿ ಲಾರಿಯನ್ನು ತಡೆದು ಪರಿಶೀಲಿಸಿದ ವೇಳೆ 320 ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಲಾಗಿದ್ದ 160 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಅಕ್ಕಿಯ ಮೌಲ್ಯ 3.84 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ 3.50 ಲಕ್ಷ ರೂ. ಮೌಲ್ಯದ ಲಾರಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಜಪ್ತಿಯಾದ ಅಕ್ಕಿ ಮತ್ತು ಲಾರಿಯ ಒಟ್ಟು ಮೌಲ್ಯ 7.34 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

