ಉಳ್ಳಾಲ, ಜು.24: ರಸ್ತೆ ದುರವಸ್ಥೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮದೊಳಗೆ ತಲುಪಲು ಸಾಧ್ಯವಾಗದೆ ಅರ್ಧದಲ್ಲೇ ನಿಲ್ಲಬೇಕಾದ ಪರಿಣಾಮ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರನ್ನು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಪಾವೂರು ಗ್ರಾಮದಲ್ಲಿ ನಡೆದಿದೆ.


ಪಾವೂರು ಗ್ರಾಮದ ಇನೋಳಿ ಕಲ್ಲಾಜೆ ನಿವಾಸಿ ಸುಮಾರು 85 ವರ್ಷದ ಯಮುನಾ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕರೆಸಲಾಗಿತ್ತು. ಆದರೆ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಆಂಬ್ಯುಲೆನ್ಸ್ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯದಲ್ಲೇ ನಿಲ್ಲಬೇಕಾಯಿತು.
ಬಳಿಕ ಸ್ಥಳೀಯರು ಆಟೋ ರಿಕ್ಷಾ ವ್ಯವಸ್ಥೆ ಮಾಡಿ, ಹರಸಾಹಸಪಟ್ಟು ವೃದ್ಧೆಯನ್ನು ಆಟೋದಲ್ಲಿ ಆಂಬ್ಯುಲೆನ್ಸ್ ನಿಂತಿದ್ದ ಸ್ಥಳದವರೆಗೆ ಕೊಂಡೊಯ್ದು, ಅಲ್ಲಿಂದ ಆಸ್ಪತ್ರೆಗೆ ರವಾನಿಸಿದರು.
ಸ್ಥಳೀಯರ ಪ್ರಕಾರ, ರಸ್ತೆಗೆ ಕೆಲ ದಿನಗಳ ಹಿಂದೆ ಮಣ್ಣು ಹಾಕಲಾಗಿದ್ದು, ಮಳೆಯ ಪರಿಣಾಮ ರಸ್ತೆ ಮತ್ತಷ್ಟು ಕೆಸರಿನಿಂದ ಕೂಡಿದ್ದು ವಾಹನ ಸಂಚಾರ ಮಾತ್ರವಲ್ಲದೆ ಕಾಲ್ನಡಿಗೆಯೂ ದುಸ್ತರವಾಗಿದೆ. ಈ ಕುರಿತು ಕಳೆದ ತಿಂಗಳೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಲಾಗಿತ್ತು. ಬಳಿಕ ಹಾಕಿದ್ದ ಮಣ್ಣನ್ನು ತೆರವುಗೊಳಿಸಿದರೂ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಮಳೆಯೊಂದಿಗೆ ರಸ್ತೆ ಮತ್ತಷ್ಟು ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತುರ್ತು ವೈದ್ಯಕೀಯ ಸೇವೆಗೆ ಸಹ ಅಡ್ಡಿಯಾಗುತ್ತಿರುವ ಈ ರಸ್ತೆ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.


