ನವದೆಹಲಿ, ಜು. 22 : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹಾಗೂ ಸಂಸತ್ತಿನಲ್ಲಿ ಗೊಂದಲ ಸೃಷ್ಟಿಸಲು ವಿದ್ಯಾರ್ಥಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯನ್ನು ಖಂಡಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.”ನೀಟ್ ವಿಚಾರವಾಗಿ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರೂ, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಚರ್ಚೆಯನ್ನು ಬಿಟ್ಟು ರಾಜಕೀಯ ನಾಟಕಕ್ಕೆ ಆದ್ಯತೆ ನೀಡಿದೆ. ನಾವು ವಿದ್ಯಾರ್ಥಿಗಳಿಗೆ ಬರಿ ಘೋಷಣೆಗಳನ್ನು ನೀಡುವುದಲ್ಲ. ಅವರಿಗೆ ನಿಖರ ಉತ್ತರಗಳು, ಶೈಕ್ಷಣಿಕ ಸುಧಾರಣೆಗಳು ಮತ್ತು ಹೊಣೆಗಾರಿಕೆಯನ್ನು ತಲುಪಿಸುವ ಅಗತ್ಯವಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣ ಬದ್ಧವಾಗಿದೆ. ಪ್ರಧಾನಿ ನಿವಾಸದ ಎದುರು ಧರಣಿ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಾಗಿದ್ದು, ಭದ್ರತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

