ಮಂಗಳೂರು/ಉಡುಪಿ, ಜು. 22 : ಸಾಮಾನ್ಯವಾಗಿ ರಾಜ್ಯದ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಗಣನೀಯವಾಗಿ ಕೊರತೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ವರ್ಷದ ಜನವರಿ 1ರಿಂದ ಜುಲೈ 19ರವರೆಗೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ 39 ಶೇಕಡಾ ಮಳೆ ಕೊರತೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯಲ್ಲಿ 1,929.8 ಮಿ.ಮೀ. ಮಳೆ ಬೀಳಬೇಕಾಗಿದ್ದರೆ, ಕೇವಲ 1,174.9 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 2,203.4 ಮಿ.ಮೀ. ಸಾಮಾನ್ಯ ಮಳೆಯ ಬದಲಾಗಿ 1,348.2 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಶೇ.39ರಷ್ಟು ಕೊರತೆ ಕಂಡುಬಂದಿದೆ.ಭತ್ತದ ನಾಟಿ ಮತ್ತು ಕೃಷಿ ಚಟುವಟಿಕೆಗಳಿಗೆ ಅತ್ಯಂತ ಮಹತ್ವದ ಜೂನ್ ತಿಂಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ದಕ್ಷಿಣ ಕನ್ನಡದಲ್ಲಿ ಜೂನ್ ತಿಂಗಳಲ್ಲಿ 57 ಶೇಕಡಾ, ಉಡುಪಿಯಲ್ಲಿ 50 ಶೇಕಡಾ ಮಳೆ ಕೊರತೆ ದಾಖಲಾಗಿದ್ದು, ಇದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಪುತ್ತೂರಿನಲ್ಲಿ ಅತ್ಯಧಿಕ 48 ಶೇಕಡಾ ಮಳೆ ಕೊರತೆ ದಾಖಲಾಗಿದೆ. ನಂತರ ಬಂಟ್ವಾಳ ಮತ್ತು ಮಂಗಳೂರಿನಲ್ಲಿ ತಲಾ 45 ಶೇಕಡಾ, ಮೂಡುಬಿದಿರೆಯಲ್ಲಿ 44 ಶೇಕಡಾ, ಬೆಳ್ತಂಗಡಿಯಲ್ಲಿ 43 ಶೇಕಡಾ, ಉಳ್ಳಾಲದಲ್ಲಿ 37 ಶೇಕಡಾ, ಕಡಬದಲ್ಲಿ 27 ಶೇಕಡಾ ಹಾಗೂ ಸುಳ್ಯದಲ್ಲಿ 26 ಶೇಕಡಾ ಮಳೆ ಕೊರತೆ ದಾಖಲಾಗಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದ್ದು, ಕೃಷಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷದ ಮಳೆ ಕೊರತೆಯಿಂದ ರೈತರು ಬೆಳೆ, ನೀರಾವರಿ ಹಾಗೂ ಮುಂದಿನ ಕೃಷಿ ಚಟುವಟಿಕೆಗಳ ಬಗ್ಗೆ ಚಿಂತಿತರಾಗಿದ್ದಾರೆ.

