ಟೋಂಕ್, ಜು. 21 : ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ. ಬಳಿಕ ಚಿರತೆ ಮದ್ಯದಂಗಡಿಯೊಳಗೆ ಆಶ್ರಯ ಪಡೆದಿದ್ದು, ಸುಮಾರು ಐದು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಅದನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.

ಸೋಮವಾರ ಬೆಳಗ್ಗೆ ಸುಮಾರು 8.45ರ ವೇಳೆಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಮಾಲಿ ಸ್ಥಳಕ್ಕೆ ತೆರಳಿದಾಗ, ಚಿರತೆ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಕಾಲಿಗೆ ಗಾಯಗೊಳಿಸಿತು.ಬಳಿಕ ಚಿರತೆ ಅಲ್ಲಿಂದ ಸುಮಾರು 400 ಮೀಟರ್ ದೂರದಲ್ಲಿರುವ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿತು. ಅಲ್ಲಿನ ಮದ್ಯದಂಗಡಿ ಎದುರು ಕುಳಿತಿದ್ದ ಫತೇಹ್ ಲಾಲ್ ಕೋಲಿ ಅವರ ಮೇಲೂ ದಾಳಿ ನಡೆಸಿದ ಚಿರತೆ, ನಂತರ ನೇರವಾಗಿ ಅಂಗಡಿಯೊಳಗೆ ನುಗ್ಗಿತು. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರ ಮೂಗು ಹಾಗೂ ಬೆನ್ನಿನ ಭಾಗಕ್ಕೆ ಚಿರತೆ ತೀವ್ರವಾಗಿ ಗಾಯಗೊಳಿಸಿತು. ಸಂಜಯ್ ಹೇಗೋ ಅಂಗಡಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಿರತೆ ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಅಂಗಡಿಯ ಶಟರ್ ಅನ್ನು ಹೊರಗಿನಿಂದಲೇ ಮುಚ್ಚಿದರು. ಇದರಿಂದ ಚಿರತೆ ಹೊರಬರಲು ಸಾಧ್ಯವಾಗದೆ ಮತ್ತಷ್ಟು ಅನಾಹುತ ತಪ್ಪಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಟೋಂಕ್ ಅರಣ್ಯ ಇಲಾಖೆ, ಜೈಪುರ ಮೃಗಾಲಯದ ವಿಶೇಷ ವೈದ್ಯಕೀಯ ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.ಮದ್ಯದಂಗಡಿಯ ಶಟರ್ ಅನ್ನು ಸ್ವಲ್ಪ ತೆರೆದು ಪಶುವೈದ್ಯರ ತಂಡ ಚಿರತೆಗೆ ನಿದ್ರಾಜನಕ ಮದ್ದು ನೀಡುವಲ್ಲಿ ಯಶಸ್ವಿಯಾಯಿತು. ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಪ್ರಜ್ಞೆ ತಪ್ಪಿದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಗಾಯಗೊಂಡ ರಾಕೇಶ್ ಮಾಲಿ, ಫತೇಹ್ ಲಾಲ್ ಕೋಲಿ ಹಾಗೂ ಸಂಜಯ್ ಗುರ್ಜರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ.ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪಶುವೈದ್ಯಾಧಿಕಾರಿ ಡಾ. ಅಶೋಕ್ ತನ್ವರ್ ಮಾತನಾಡಿ, “ನನ್ನ ವೃತ್ತಿಜೀವನದಲ್ಲಿ 60ಕ್ಕೂ ಹೆಚ್ಚು ವನ್ಯಜೀವಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದೇನೆ. ಆದರೆ, ಮದ್ಯದಂಗಡಿಯೊಳಗಿನಿಂದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದು ಇದೇ ಮೊದಲ ಅನುಭವ” ಎಂದು ತಿಳಿಸಿದ್ದಾರೆ. ತೋಡರೈಸಿಂಗ್ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶವಿರುವುದರಿಂದ ಆಹಾರ ಅರಸಿ ಅಥವಾ ದಾರಿ ತಪ್ಪಿ ಚಿರತೆ ನಗರ ಪ್ರದೇಶಕ್ಕೆ ಬಂದಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಕಾರ್ಯಾಚರಣೆಯ ಅವಧಿಯಲ್ಲಿ ಪೊಲೀಸರು ಸ್ಥಳದಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಬಿಗಿ ಭದ್ರತೆ ಒದಗಿಸಿದ್ದರು.

