ಮಂಗಳೂರು, ಜು.20: ಮಂಗಳ ಗ್ರಾಮೀಣ ಯುವಕ ಸಂಘ (ರಿ.), ಕೊಣಾಜೆ ಪದವು ಇದರ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಎ.ಕೆ. ರೆಹಮಾನ್ ಕೋಡಿಜಾಲ್ ಅವರನ್ನು ಅಸೈಗೋಳಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಟ್ ಕಚೇರಿಗೆ ನಾಲ್ಕನೇ ಬಾರಿ ಭೇಟಿ ನೀಡಿದ ಎ.ಕೆ. ರೆಹಮಾನ್ ಕೋಡಿಜಾಲ್ ಅವರು, ಟ್ರಸ್ಟ್ ಆಯೋಜಿಸುವ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, ಹಲವು ರೀತಿಯ ಸಹಕಾರವನ್ನು ನೀಡುತ್ತ ಬಂದಿದ್ದಾರೆ. ಅವರ ಸಮಾಜಮುಖಿ ಸೇವೆ ಹಾಗೂ ಶಿಕ್ಷಣದ ಮೇಲಿನ ಕಾಳಜಿಯನ್ನು ಗುರುತಿಸಿ ಟ್ರಸ್ಟ್ ವತಿಯಿಂದ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಯಾದವ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ನೆರವು ನೀಡುವುದು ಟ್ರಸ್ಟ್ನ ಪ್ರಮುಖ ಧ್ಯೇಯವಾಗಿದೆ. ಇಂತಹ ಸಮಾಜಮುಖಿ ಚಿಂತನೆ ಹೊಂದಿರುವ ವ್ಯಕ್ತಿಗಳ ಸಹಕಾರದಿಂದ ಟ್ರಸ್ಟ್ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಬಳಿಕ ಎ.ಕೆ. ರೆಹಮಾನ್ ಕೋಡಿಜಾಲ್ ಅವರಿಗೆ ಶಾಲು ಹೊದಿಸಿ, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.


