




ಬಗಂಬಿಲ : ಧರ್ಮ, ಜಾತಿ, ರಾಜಕೀಯ ಅಥವಾ ಅಧಿಕಾರದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಸಾಗಿದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ನಮ್ಮ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ ಕೈಜೋಡಿಸಿದರೆ, ಬಗಂಬಿಲ ಇನ್ನಷ್ಟು ಸದೃಢವಾಗಿ ಬೆಳೆಯುತ್ತದೆ ಎಂದು ಚಿತ್ರನಟ ಕುಸಲ್ದರಸೆ ನವೀನ್ ಡಿ ಪಡೀಲ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಜೆ ಬಗಂಬಿಲದ ಶ್ರೀ ಸತ್ಯನಾರಾಯಣ ಸಭಾಭವನದಲ್ಲಿ ಬಗಂಬಿಲದ ಶ್ರೀ ಸತ್ಯನಾರಾಯಣ ಮಂದಿರ (ರಿ) ಹಾಗೂ ಸಾರ್ವಜನಿಕ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ 19ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.
ಬಗಂಬಿಲ ಸಂಸ್ಕೃತಿಯ ಊರು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸೋಣ. ಸಂಕಷ್ಟದಲ್ಲಿ ನೆರವಾದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬರೂ ತಮ್ಮ ಕುಟುಂಬದ ಜವಾಬ್ದಾರಿಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಅರಿತು ಕೆಲಸ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡಿದ್ದ ಈ ಊರು, ಇಂದು ದೈವ-ದೇವರ ಆಶೀರ್ವಾದದಿಂದ ಜಿಲ್ಲೆಯಲ್ಲೇ ಉತ್ತಮ ಹೆಸರು ಗಳಿಸಿದೆ. ಕುಂಪಲ–ಬಗಂಬಿಲ ಇಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಗುರುತಿಸಿಕೊಂಡಿದೆ.ಬರುವ ಗೌರಿ-ಗಣೇಶ ಉತ್ಸವದಲ್ಲಿ ಪ್ರತಿಯೊಂದು ಮನೆಯ ಸದಸ್ಯರೂ ಭಾಗವಹಿಸಬೇಕು. ನಮ್ಮ ಉತ್ಸವವು ಶಿಸ್ತು, ಭಕ್ತಿ ಮತ್ತು ಸಾಂಸ್ಕೃತಿಕ ವೈಭವದಿಂದ ಜಿಲ್ಲೆಯ ಗಮನ ಸೆಳೆಯುವಂತಾಗಲಿ. ಮಂಗಳೂರಿನ ಜನರೂ ಮೆಚ್ಚುವಂತಹ ಮಾದರಿ ಉತ್ಸವವನ್ನು ನಾವು ಎಲ್ಲರೂ ಸೇರಿ ನಡೆಸೋಣ.ಇತ್ತೀಚೆಗೆ ‘ಇಂಬು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇದು ತುಳು ಹಾಗೂ ಕನ್ನಡ ಕಲಾರಂಗಕ್ಕೆ ದೊರೆತ ಗೌರವವಾಗಿದೆ. ಇಂತಹ ಸಾಧನೆಗಳು ನಮ್ಮ ಯುವ ಕಲಾವಿದರಿಗೆ ಮತ್ತಷ್ಟು ಸ್ಫೂರ್ತಿಯಾಗಲಿ. ಬಗಂಬಿಲದ ಈ ಗೌರಿ-ಗಣೇಶ ಉತ್ಸವ ಅತ್ಯಂತ ಯಶಸ್ವಿಯಾಗಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಗಂಬಿಲ ಸತ್ಯನಾರಾಯಣ ಮಂದಿರ ಸಭಾಂಗಣ ಶೀಘ್ರದಲ್ಲೇ ಪೂರ್ಣಗೊಂಡು, ಸ್ಥಳೀಯರು ಸಹಕರಿಸುವ ಜೊತೆಗೆ ಊರಿನ ಅಭಿವೃದ್ಧಿಯ ಜೊತೆಗೆ ತಾನು ನಿಲ್ಲುತ್ತೇನೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಅವರ ಗೌರವವನ್ನು ಉಳಿಸುವ ಹಿನ್ನೆಲೆಯಲ್ಲಿ ಶೀಘ್ರವೇ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿ.ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿರುವ ಖ್ಯಾತ ಕಲಾವಿದ ನವೀನ್ ಪಡೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಅನೇಕರು ಮಾತನಾಡುತ್ತಾರೆ. ಆದರೆ ಅದನ್ನು ತಮ್ಮ ಕಲಾ ಜೀವನದ ಮೂಲಕ ರಾಷ್ಟ್ರ ಹಾಗೂ ವಿಶ್ವ ಮಟ್ಟಕ್ಕೆ ಪರಿಚಯಿಸುವಲ್ಲಿ ನವೀನ್ ಪಡೀಲ್ ಅವರ ಕೊಡುಗೆ ಅನನ್ಯವಾಗಿದೆ. ತುಳು ಚಿತ್ರರಂಗದ ಬೆಳವಣಿಗೆಗೆ ತಮ್ಮ ಬದುಕನ್ನೇ ಸಮರ್ಪಿಸಿರುವ ಅವರು, ತುಳು ಭಾಷೆಗೆ ವಿಶ್ವ ಮಟ್ಟದಲ್ಲಿ ಗೌರವ ತಂದುಕೊಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಷ್ಟೇ ದೊಡ್ಡ ಕಲಾವಿದ ಹಾಗೂ ಸೆಲೆಬ್ರಿಟಿಯಾಗಿದ್ದರೂ ತಾವು ಬೆಳೆದು ಬಂದ ಮಾರ್ಗವನ್ನು ಎಂದಿಗೂ ಮರೆಯದ ವ್ಯಕ್ತಿತ್ವ ಅವರದು. ತಮ್ಮ ಹುಟ್ಟೂರು ಬಗಂಬಿಲದ ಹಿಂದಿನ ಸ್ಥಿತಿ ಹಾಗೂ ಇಂದಿನ ಅಭಿವೃದ್ಧಿಯನ್ನು ಹೆಮ್ಮೆಯಿಂದ ಸ್ಮರಿಸುವ ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಚಿತ್ರದ ಚಿತ್ರೀಕರಣ ಮುಗಿದ ನಂತರವೂ ಹೊಸ ಕಲಾವಿದರಿಗೆ ಮಾರ್ಗದರ್ಶನ ನೀಡುವುದು, ಅಭಿನಯದ ಸೂಕ್ಷ್ಮತೆಗಳನ್ನು ಕಲಿಸಿಕೊಡುವುದು ಅವರ ವಿಶೇಷ ಗುಣ. ಒಬ್ಬ ಉತ್ತಮ ನಟನಷ್ಟೇ ಅಲ್ಲ, ಉತ್ತಮ ಗುರುವಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವೀನ್ ಪಡೀಲ್ ನಟಿಸುವ ತುಳು ಹಾಗೂ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಬೆಂಬಲಿಸುವ ಮೂಲಕ ನಮ್ಮ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಚಿತ್ರರಂಗವನ್ನು ಬೆಳೆಸಬೇಕಾಗಿದೆ. ಕುಂಪಲದಲ್ಲಿದ್ದಾಗ ಸ್ಥಳೀಯ ಜನರ ಅಭಿವೃದ್ಧಿಯ ಬಗ್ಗೆ ಯೋಚಿಸಲಾಗುತಿತ್ತು. ಇಂದು ಜಿಲ್ಲೆಯ ಮಟ್ಟದ ಜವಾಬ್ದಾರಿಗಳಿರುವುದರಿಂದ ಅನೇಕ ಜವಾಬ್ದಾರಿಗಳ ನಡುವೆಯೂ ಸಮಯ ನೀಡಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಶೀಘ್ರದಲ್ಲೇ ಬಗಂಬಿಲದ ಸಭಾಂಗಣದ ಕಾರ್ಯಕ್ಕೆ ಸಮಯ ನೀಡಿ ಲೋಕಾರ್ಪಣೆ ನೆರವೇರಿಸಬೇಕಿದೆ. ಇಂದು ಬಗಂಬಿಲವು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿಯ ಹಾದಿಯಲ್ಲಿದ್ದು, ಇಂತಹ ಬೆಳವಣಿಗೆಗೆ ನವೀನ್ ಪಡೀಲ್ ಅವರಂತಹ ವ್ಯಕ್ತಿತ್ವಗಳ ಪ್ರೋತ್ಸಾಹವೂ ಮತ್ತಷ್ಟು ಬಲ ತುಂಬಲಿ ಎಂಬುದು ನಮ್ಮ ಆಶಯ ಎಂದರು.
ಸಮಾರಂಭದಲ್ಲಿ ತುಳುನಾಡ ಮಾಣಿಕ್ಯ ನವೀನ್ ಡಿ. ಪಡೀಲ್, ವಕೀಲರಾದ ಶರಣ್ ಕುತ್ತಾರ್, ಸೋಮೇಶ್ವರ ಪುರಸಭೆ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂದಿರದ ಮಹಾಪೋಷಕ ದಿವಾಕರ್ ಎಂ. ಬಗಂಜಬಿಲ, ಪ್ರವೀಣ್ ಎಸ್. ಸುವರ್ಣ, ಉದಯ್ ರಾಜ್ ಶೆಟ್ಟಿ, ಹರೀಶ್ ಬಗಂಬಿಲ ಹಾಗೂ ಪ್ರಶಾಂತ್ ಅಮೃತನಗರ , ಶಿವಪ್ರಸಾದ್ ಬಗಂಬಿಲ, ರವಿಪ್ರಸಾದ್ ಬಗಂಬಿಲ ಉಪಸ್ಥಿತರಿದ್ದು, ಉತ್ಸವದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭ ವಕೀಲ ಶರಣ್ ಕುತ್ತಾರ್, ಸೋಮೇಶ್ವರ ಪುರಸಭೆ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂದಿರದ ಮಹಾಪೋಷಕ ದಿವಾಕರ್ ಎಂ. ಬಗಂಬಿಲ, ಪ್ರವೀಣ್ ಎಸ್. ಸುವರ್ಣ, ಉದಯ್ ರಾಜ್ ಶೆಟ್ಟಿ, ಹರೀಶ್ ಬಗಂಬಿಲ ಹಾಗೂ ಪ್ರಶಾಂತ್ ಅಮೃತನಗರ , ಶಿವಪ್ರಸಾದ್ ಬಗಂಬಿಲ, ರವಿಪ್ರಸಾದ್ ಬಗಂಬಿಲ ಉಪಸ್ಥಿತರಿದ್ದರು.
ಶಿವ-ಪಾರ್ವತಿಯವರು ಕೈಲಾಸದಿಂದ ಭೂಲೋಕಕ್ಕೆ ಆಗಮಿಸುತ್ತಿರುವ ದಿವ್ಯ ಪರಿಕಲ್ಪನೆಯನ್ನು ಒಳಗೊಂಡ ವಿಶಿಷ್ಟ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸಲಾಯಿತು. ಧಾರ್ಮಿಕ ಭಾವನೆ, ಸಾಂಸ್ಕೃತಿಕ ವೈಭವ ಮತ್ತು ಕಲಾತ್ಮಕತೆಯನ್ನು ಒಂದೇ ಚಿತ್ರಣದಲ್ಲಿ ಮೂಡಿಸಿರುವ ಈ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆಯಿತು. ಶಿವ-ಪಾರ್ವತಿಯ ದಿವ್ಯ ಸಾನ್ನಿಧ್ಯವನ್ನು ಪ್ರತಿಬಿಂಬಿಸುವ ಈ ವಿನ್ಯಾಸವು ಉತ್ಸವದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿತು.
ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ನವೀನ್ ಡಿ ಪಡೀಲ್ ಅವರನ್ನು ಸನ್ಮಾನಿಸಲಾಯಿತು. ಬಗಂಬಿಲ ಸತ್ಯನಾರಾಯಣ ಮಂದಿರದ ಯುಟ್ಯೂಬ್ ಚಾನೆಲ್ ನ ಬಿಡುಗಡೆಯೂ ನಡೆಯಿತು.
ಬಗಂಬಿಲದ ಶ್ರೀ ಸತ್ಯನಾರಾಯಣ ಮಂದಿರ ಹೊಸ ಕಟ್ಟಡ ಸ್ಥಾಪನೆಯಾಗಿ ಈಗ ಹತ್ತು ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಮಂದಿರವು ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಸಾಮಾಜಿಕ ಸೇವಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಸಭಾಂಗಣ ನಿರ್ಮಾಣಕ್ಕಾಗಿ ಜಾಗವನ್ನು ಖರೀದಿಸಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಪುನರಾರಂಭಗೊಂಡಿದ್ದು, ಸುಮಾರು ಶೇ.50ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಊರಿನ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನಿಕ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಬಗಂಬಿಲದಿಂದ ಬೈಪಾಸ್‌ವರೆಗಿನ ಪ್ರದೇಶದ ಸಾರ್ವಜನಿಕರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಸಭಾಂಗಣವನ್ನು ಬಳಸಿಕೊಳ್ಳಬಹುದಾಗಿದೆ.ಒಂದೇ ಸಮಯದಲ್ಲಿ ಸುಮಾರು 1,000 ಜನರು ಸೇರಬಹುದಾದ ವಿಶಾಲ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದು ಈ ಭಾಗದ ಜನರಿಗೆ ಬಹು ಉಪಯುಕ್ತವಾಗಲಿದೆ.
ಪ್ರವೀಣ್ ಐ ಬಗಂಬಿಲ
ಉಪಾಧ್ಯಕ್ಷರು
ಕೋಟೆಕಾರು ಪಟ್ಟಣ ಪಂಚಾಯತ್

