ಸುಳ್ಯ: ಮಧ್ಯದ ಅಮಲಿನಲ್ಲಿದ್ದ ನಾಲ್ವರು ಸ್ನೇಹಿತರು ಪರಸ್ಪರ ಹೊಡೆದಾಡಿಕೊಂಡು ರಸ್ತೆಯಲ್ಲೇ ಎಳೆದಾಟ ನಡೆಸಿದ ಘಟನೆ ಜುಲೈ 17ರಂದು ಸಂಜೆ ಸುಳ್ಯದ ಬಾಲೆಮಕ್ಕಿ ಟ್ಯಾಕ್ಸಿ ಕಾರು ನಿಲ್ದಾಣದ ಸಮೀಪ ನಡೆದಿದೆ.

ಹೊಡೆದಾಟದಲ್ಲಿ ತೊಡಗಿದ್ದ ನಾಲ್ವರೂ ಕೂಲಿ ಕಾರ್ಮಿಕರಾಗಿದ್ದು, ದಿನದ ಕೆಲಸ ಮುಗಿಸಿಕೊಂಡು ವಾಪಸಾಗುವ ವೇಳೆ ಮದ್ಯ ಸೇವಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸಣ್ಣ ಮಾತಿನ ಚಕಮಕಿ ತೀವ್ರಗೊಂಡು ಪರಸ್ಪರ ಹೊಡೆದಾಟಕ್ಕೆ ತಿರುಗಿದೆ.
ಅಮಲಿನಲ್ಲಿದ್ದ ನಾಲ್ವರು ರಸ್ತೆಯಲ್ಲೇ ಪರಸ್ಪರ ತಳ್ಳಾಟ, ಎಳೆದಾಟ ನಡೆಸಿ ಗಲಾಟೆ ಮಾಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ಗಮನಿಸಿದ ಸ್ಥಳೀಯ ಟ್ಯಾಕ್ಸಿ ಚಾಲಕರು ತಕ್ಷಣ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದರು.
ಬಳಿಕ ನಾಲ್ವರಿಗೂ ಬುದ್ಧಿವಾದ ಹೇಳಿ ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಕೆಲಕಾಲ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ನಂತರ ಪರಿಸ್ಥಿತಿ ಸಹಜಗೊಂಡಿತು.

