

ಮಂಗಳೂರು: ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರದರ್ಸ್ ಯುವಕ ಮಂಡಲದ ಅಧ್ಯಕ್ಷರು, ಉಳ್ಳಾಲ ಮೊಗವೀರ ಸಂಘದ ಮಾಜಿ ಜೊತೆ ಕಾರ್ಯದರ್ಶಿ, ಮೊಗವೀರ ಸಮುದಾಯದ ಯುವ ನಾಯಕರಾಗಿ ಮೂಡಿಬರುತ್ತಿರುವ ರಾಜೇಶ್ ಪುತ್ರನ್ ಉಳ್ಳಾಲ ಇವರು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ (ರಿ) ದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಹಿಂದೆ ಉಳ್ಳಾಲ ಬ್ರದರ್ಸ್ ಯುವಕ ಮಂಡಲದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಉತ್ತಮ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಸಂಘದ ಅಭಿವೃದ್ಧಿ, ಮೀನುಗಾರರ ಹಿತಾಸಕ್ತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸದಾ ಶ್ರಮಿಸುತ್ತಿರುವ ಅವರು ಇದೀಗ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಮೀನುಗಾರ ಸಮುದಾಯಕ್ಕೆ ಸಂತಸದ ವಿಚಾರವಾಗಿದೆ.
ಅವರ ಅಧಿಕಾರಾವಧಿಯಲ್ಲಿ ಮೀನುಗಾರರಿಗೆ ಇನ್ನಷ್ಟು ಸೌಲಭ್ಯಗಳು, ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಂಘದ ಅಭಿವೃದ್ಧಿಗೆ ಹೊಸ ಆಯಾಮಗಳು ದೊರೆಯಲಿ ಎಂದು ಸದಸ್ಯರು ಆಶಯ ವ್ಯಕ್ತಪಡಿಸಿದ್ದಾರೆ.


