ಮಂಗಳೂರು,ಜು. 11 : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2026 ರ ಮೊದಲ ಆರು ತಿಂಗಳಲ್ಲಿ, ಜನವರಿಯಿಂದ ಜೂನ್ 30 ರವರೆಗೆ, ಒಟ್ಟು 136 ಜನರು ನಾಪತ್ತೆಯಾಗಿದ್ದಾರೆ. ಅವರಲ್ಲಿ 106 ಜನರನ್ನು ಪತ್ತೆಹಚ್ಚಲಾಗಿದ್ದು, ಇನ್ನು 30 ಜನರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ .
ನಾಪತ್ತೆ ವರದಿಯಾದ 64 ಪುರುಷರಲ್ಲಿ 44 ಜನರನ್ನು ಪತ್ತೆಹಚ್ಚಲಾಗಿದೆ, ಆದರೆ 20 ಜನರು ಇನ್ನೂ ಪತ್ತೆಯಾಗಿಲ್ಲ. ಇನ್ನು 44 ಮಹಿಳೆಯರಲ್ಲಿ 38 ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ಆರು ಜನರು ಪತ್ತೆಯಾಗಿಲ್ಲ. ಎಲ್ಲಾ ಐದು ಹುಡುಗರು ಪತ್ತೆಯಾಗಿದ್ದಾರೆ, ನಾಪತ್ತೆಯಾದ 23 ಹುಡುಗಿಯರಲ್ಲಿ 19 ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ನಾಲ್ವರು ಇನ್ನೂ ಪತ್ತೆಯಾಗಿಲ್ಲ.ಪ್ರೀತಿ ಸಂಬಂಧ, ಅಪ್ರಬುದ್ಧತೆ, ಉದ್ಯೋಗ, ಅಕ್ರಮ ಸಂಬಂಧ, ಕುಟುಂಬ ಕಲಹ, ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ, ಲೈಂಗಿಕ ಶೋಷಣೆ, ಅನಾರೋಗ್ಯ ಸಮಸ್ಯೆಗಳು ನಾಪತ್ತೆಯ ಪ್ರಮುಖ ಕಾರಣವಾಗಿವೆ ಎನ್ನುವುದು ಪೊಲೀಸ್ ವಿಚಾರಣೆ, ದಾಖಲಾದ ಪ್ರಕರಣಗಳ ಮಾಹಿತಿಯಲ್ಲಿ ಸ್ಪಷ್ಟವಾಗಿದೆ.ನಾಪತ್ತೆಯಾದ ಪ್ರಕರಣಗಳಲ್ಲಿ ಹೊರಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಟ್ಟಡ, ಮನೆ ಕೆಲಸ, ಗಾರೆ ಕೆಲಸ ಅಥವಾ ಇನ್ಯಾವುದೇ ಕಾರಣಕ್ಕೆ ಹೊರ ಜಿಲ್ಲೆಯಿಂದ ಬಂದಂತಹ ಯುವತಿಯರು, ನಾಪತ್ತೆಯಾಗುತ್ತಿರುವ ಸಂಖ್ಯೆ ಹೆಚ್ಚಿದೆ. ಇವರ ನಾಪತ್ತೆಗೆ ಸಾಮಾಜಿಕ ಜಾಲತಾಣದ ನಂಟು, ಅಕ್ರಮ ಸಂಬಂಧಗಳು ಕಾರಣ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಂಡ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಮತ್ತೊಬ್ಬ ವ್ಯಕ್ತಿ ಪಾಂಡೇಶ್ವರ ಠಾಣೆಗೆ ದೂರು ನೀಡುತ್ತಾನೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಜಪೆ ಠಾಣೆ ವ್ಯಾಪ್ತಿಯ ವ್ಯಕ್ತಿಗೂ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ಮಹಿಳೆಗೂ ಅಕ್ರಮ ಸಂಬಂಧವಿರುವುದು ಪತ್ತೆಯಾಗಿದೆ. ಈ ರೀತಿ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ಇದೇ ನಾಪತ್ತೆ ಪ್ರಕರಣಗಳಿಗೆ ಕಾರಣವಾಗಿದೆ.

