ಉಡುಪಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸರಳೆಬೆಟ್ಟು–ಕೊಡಂಗೆ ದೇವಸ್ಥಾನದ ಸಮೀಪ ನಡೆದಿದೆ.

ಮಣಿಪಾಲದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಎಂದಿನಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ, ಕೊಡಂಗೆ ದೇವಸ್ಥಾನದ ಸಮೀಪದ ಕಿರಿದಾದ ತಿರುವಿನಲ್ಲಿ ಚಾಲಕ ಬಸ್‌ನ್ನು ರಿವರ್ಸ್ ತೆಗೆಯುವಾಗ ನಿಯಂತ್ರಣ ತಪ್ಪಿ ಪಕ್ಕದ ತೋಡಿಗೆ ಉರುಳಿದೆ ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ಬಸ್‌ನಲ್ಲಿ ಸುಮಾರು 20 ವಿದ್ಯಾರ್ಥಿಗಳು ಇದ್ದರು. ಬಸ್ ಉರುಳುತ್ತಿದ್ದಂತೆ ಮಕ್ಕಳು ಭಯದಿಂದ ಕಿರುಚಾಡಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದರು. ಘಟನೆಯಲ್ಲಿ ಏಳು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಸಹಾಯದಿಂದ ಬಸ್‌ನ್ನು ಮೇಲಕ್ಕೆತ್ತಲಾಗಿದೆ. ಚಾಲಕನ ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

