ಮಂಗಳೂರು, ಜು. 08 : ಮಹಾನಗರ ಪಾಲಿಕೆಯ ಸಿಬ್ಬಂದಿಗಳು, ಅಧಿಕಾರಿಗಳು ಎಸ್ಐಆರ್ ಕರ್ತವ್ಯಕ್ಕೆ ನೇಮಕಗೊಂಡಿರುವುದರಿಂದ ಇನ್ನು “ಒಂದು ತಿಂಗಳು ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ ಅರ್ಜಿ ಸ್ವೀಕಾರ ಬಂದ್” ಎಂದು ಬೋರ್ಡ್ ಹಾಕಲಾಗಿದೆ. ಇದರಿಂದ ಸಾರ್ವಜನಿಕರು ತುರ್ತಾಗಿ ಜನನ , ಮರಣ ಪತ್ರ ಪಡೆಯಲು ಸಾಧ್ಯವಾಗದೇ ಕಂಗೆಟ್ಟಿದ್ದಾರೆ. ಮನಪಾ ಆಡಳಿತ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.

ಆಡಳಿತಾಧಿಕಾರಿ ಮೂಲಕ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಕಾರ ಇನ್ನು ಒಂದು ತಿಂಗಳು ಮಂಗಳೂರಿನಲ್ಲಿ ಜನನ ಮರಣಗಳು ಇರುವುದೇ ಇಲ್ಲವೇ? ಶಾಲಾ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಅಗತ್ಯವಾಗಿ ಬೇಕಿರುವ ಪೋಷಕರು ಏನು ಮಾಡಬೇಕು? ಪಾಸ್ ಪೋರ್ಟ್ ಮಾಡಿಸಿಕೊಳ್ಳವವರು ಏನು ಮಾಡಬೇಕು? ಸಾರ್ವಜನಿಕರು ಕಂಗಾಲಾಗಿ ಬೇರೆ ದಾರಿ ಕಾಣದೇ, ಸಾರ್ವಜನಿಕರು ನಾವು ಶಾಸಕರಿಗೆ ದೂರು ಕೊಡುತ್ತೇವೆ ಎಂದಿದ್ದಕ್ಕೆ, ನಿನ್ನೆಯಿಂದ ಅರ್ಜಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಆದರೆ ಪ್ರಮಾಣ ಪತ್ರಕ್ಕೆ ಅರ್ಜೆಂಟ್ ಮಾಡುವ ಹಾಗಿಲ್ಲ, ಎಂದು ಕಂಡೀಷನ್ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.ಹಾಗಾದರೆ ಇನ್ನು ಒಂದು ತಿಂಗಳು ಮಂಗಳೂರಿನ ಜನರಿಂದ ಯಾವುದೇ ರೀತಿಯ ತೆರಿಗೆ ವಸೂಲಿ ಇಲ್ಲ ಎಂದು ಪಾಲಿಕೆಯವರು ಬೋರ್ಡ್ ಹಾಕಲಿ. ಈ ಕಾಂಗ್ರೆಸ್ ನೇತೃತ್ವದ ಪಾಲಿಕೆಯ ಆಡಳಿತ ಜನರಿಗೆ ಯಾವ ರೀತಿಯಲ್ಲಿ ಹಿಂಸೆ ನೀಡುತ್ತಿದೆ ಎಂಬುದಕ್ಕೆ, ಪ್ರತಿನಿತ್ಯ ಪಾಲಿಕೆಯ ಕಚೇರಿ ಮುಂದೆ ಜನರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಸಾಲುಗಟ್ಟಿ ನಿಂತಿರುವುದೇ ಸಾಕ್ಷಿ. ಈ ಅವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಸಾರ್ವಜನಿಕರ ಹಾಗೂ ಪಾಲಿಕೆಯ ಸಿಬ್ಬಂದಿಗಳ ನಡುವೆ ಅನಗತ್ಯ ಮಾತಿನ ಚಕಮಕಿ ನಡೆಯುತ್ತಿದ್ದು, ಇದಕ್ಕೆಲ್ಲ ಅಂತ್ಯ ಹಾಡಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಬೇಕು ಎಂದು ಪಾಲಿಕೆಗೆ ಎಚ್ಚರಿಕೆ ನೀಡಿದರು.ಮಂಗಳೂರು ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆ (ಕನ್ವರ್ಷನ್) ಗೊಂದಲ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಈಗ ಭೂಪರಿವರ್ತನೆ (ಕನ್ವರ್ಷನ್) ಕಗ್ಗಂಟಾಗಿದ್ದು ಜನ ಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಮೊದಲು ಕಂದಾಯ ಇಲಾಖೆಯಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಗುತ್ತಿದ್ದ ಭೂಪರಿವರ್ತನೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಈಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವಹಿಸಿಕೊಟ್ಟಿದೆ. ಹಿಂದೆ ಕಂದಾಯ ಇಲಾಖೆಯಡಿ ಬರುವ ಸರ್ವೇಯರ್ ಗಳು, ಯಾವುದೇ ಒಂದು ಪ್ರದೇಶಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರೀಕ್ಷಿಸಿ, ಸರ್ವೇ ಮಾಡಿ, ನಕ್ಷೆ ತಯಾರಿಸಿ ಕೊಡುತ್ತಿದ್ದರು. ಜನಸಾಮಾನ್ಯರು ಅಂತಹ ನಕ್ಷೆಯ ಸಹಾಯದಿಂದ ತಾಲೂಕು ಕಚೇರಿಗಳಲ್ಲಿ ಕನ್ವರ್ಷನ್ ಪಡೆದುಕೊಳ್ಳುತ್ತಿದ್ದರು.ಇದೀಗ ಕನ್ವರ್ಷನ್ ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು, ಸರ್ವೆಯರ್ ಗಳನ್ನು, ಕಂದಾಯ ಇಲಾಖೆಯಲ್ಲಿ ಇಟ್ಟುಕೊಂಡು, ಯಾವುದೇ ಪರ್ಯಾಯ ವ್ಯವಸ್ಥೆಗಳನ್ನು ಮಾಡದೇ, ನೇರವಾಗಿ ಮುಡಾಗೆ ವಹಿಸಿದ ಪರಿಣಾಮ ಗೊಂದಲ ಉಂಟಾಗಿದೆ.
ಯಾವುದೇ ನಕ್ಷೆ ಇಲ್ಲದೇ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎಂದು ಮುಡಾದವರು ಹೇಳುತ್ತಾರೆ. ನಕ್ಷೆ ಮಾಡಬೇಕಾದ ಕಂದಾಯ ಇಲಾಖೆಯವರು ಸರಕಾರದ ಆದೇಶದ ಪ್ರಕಾರ ನಾವು ಮಾಡುವಂತಿಲ್ಲ ಎನ್ನುತ್ತಿದ್ದಾರೆ. ಕನ್ವರ್ಷನ್ ಆಗದೇ ಯಾವುದೇ ಸೈಟ್ ಮಾರಾಟ ಸಾಧ್ಯವಿಲ್ಲ, ಖರೀದಿಗೂ ಯಾರೂ ಮುಂದೆ ಬರುವುದಿಲ್ಲ. ಈ ವಿಚಾರದಲ್ಲಿ ಸಾರ್ವಜನಿರು ಪರದಾಡುವಂತಾಗಿದೆ ಎಂದು ಆರೋಪಿಸಿದರು.

