ಉಳ್ಳಾಲ: ಬಿಜೆಪಿ ಹಿರಿಯ ಮುಖಂಡ, ಜನಸಂಘದ ಸಕ್ರಿಯ ಕಾರ್ಯಕರ್ತ ಹಾಗೂ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂಜೀವ ಶೆಟ್ಟಿ ಅಂಬ್ಲಮೊಗರು (70) ಅವರು ನಿಧನರಾದರು.

ಸಂಜೀವ ಶೆಟ್ಟಿ ಅವರು ಅಂಬ್ಲಮೊಗರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಮಂಗಳೂರು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಸಾರ್ವಜನಿಕ ಬದುಕಿನಲ್ಲಿ ಸರಳತೆ, ಸಂಘಟನಾ ನಿಷ್ಠೆ ಮತ್ತು ಸಮಾಜಮುಖಿ ಸೇವೆಯ ಮೂಲಕ ಜನಮನ್ನಣೆ ಗಳಿಸಿದ್ದ ಅವರು, ಬಿಜೆಪಿ ಸಂಘಟನೆಯ ಬಲವರ್ಧನೆಗೆ ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಮನಾರ್ಹ ಸೇವೆ ಸಲ್ಲಿಸಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಮಾಜದ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಸಂಘಟನೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಂಗಳೂರು ಮಂಡಲ ಪದಾಧಿಕಾರಿಗಳ ಸಭೆ ರದ್ದು
ಬಿಜೆಪಿ ಹಿರಿಯ ಮುಖಂಡ ಹಾಗೂ ಅಂಬ್ಲಮೊಗರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಅಂಬ್ಲಮೊಗರು ಅವರ ನಿಧನದ ಹಿನ್ನೆಲೆಯಲ್ಲಿ, ಇಂದು ಸಂಜೆ ನಡೆಯಬೇಕಿದ್ದ ಬಿಜೆಪಿ ಮಂಗಳೂರು ಮಂಡಲದ ಪದಾಧಿಕಾರಿಗಳ ಸಭೆಯನ್ನು ರದ್ದುಪಡಿಸಲಾಗಿದೆ. ಈ ಕುರಿತು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೈತಬೈಲ್ ಪ್ರಕಟಣೆ ನೀಡಿ, ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

