ಕೊಣಾಜೆ: ಯಾವುದೇ ಸಂಘಟನೆಯ ಅಧ್ಯಕ್ಷ ಸ್ಥಾನವು ಮುಳ್ಳಿನ ಮೇಲಿನ ನಡಿಗೆಯಂತಿದ್ದು, ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಮುನ್ನಡೆಸಿದಾಗ ಮಾತ್ರ ಯಶಸ್ವಿ ನಾಯಕತ್ವ ಸಾಧ್ಯವಾಗುತ್ತದೆ. ಸಂಘಟನೆಗೆ ಸಲ್ಲಿಸಿದ ಸೇವೆಗೆ ಪ್ರತಿಫಲ ನಿರೀಕ್ಷಿಸದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಅಧ್ಯಕ್ಷ ಬಾಬು ಬಂಗೇರ ಹೇಳಿದರು.

ಅವರು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವವಾಹಿನಿಯ 35ಕ್ಕೂ ಅಧಿಕ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಕಾರ್ಯಗಳಿಗೆ ಸಂಘಟನೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಯೋಜಿತ ಅಧ್ಯಕ್ಷ ಮುರಳಿ ಕೊಣಾಜೆ ಹಾಗೂ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ವಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸದಸ್ಯರಾದ ರವಿಕಲಾ ಜಗದೀಶ್ ಕೋಟ್ಯಾನ್ ಹಾಗೂ ಆಶಾ ಪ್ರವೀಣ್ ಅವರಿಗೆ ಸಾಧನಾ ಪುರಸ್ಕಾರ ಪ್ರದಾನಿಸಲಾಯಿತು. ಇದೇ ವೇಳೆ ಎರಡು ಮಕ್ಕಳ ಅನಾಥಾಶ್ರಮಗಳಿಗೆ ಆರ್ಥಿಕ ನೆರವು ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ-ಕೊಣಾಜೆ ಅಧ್ಯಕ್ಷ ವಿಜೇತ್ ಪಜೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಉದ್ಯಮಿ ನಿಶಾನ್ ಪೂಜಾರಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಆಶೋಕ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಉಪಾಧ್ಯಕ್ಷ ಅಜಿತ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಿಥುನ್ ಪಜೀರ್ ವಾರ್ಷಿಕ ವರದಿ ವಾಚಿಸಿದರು. ಸ್ಥಾಪಕಾಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ಎನ್. ಅಶೋಕ್ ಕುಮಾರ್ ಪಡ್ಪು ಪ್ರತಿಜ್ಞಾವಿಧಿ ಬೋಧಿಸಿದರು. ನಿಯೋಜಿತ ಕಾರ್ಯದರ್ಶಿ ಆಶಾ ಪ್ರವೀಣ್ ವಂದಿಸಿದರು. ಸುರೇಖ ಎಚ್. ಪೂಜಾರಿ, ಹರ್ಷಿತಾ ಹಾಗೂ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

