ಬೆಂಗಳೂರು, ಜು. 04:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಬಿಎಲ್ಒಗಳು (ಬೂತ್ ಮಟ್ಟದ ಅಧಿಕಾರಿಗಳು) ನಿಯಮಾವಳಿಗಳನ್ನು ಗಾಳಿಗೆ ತೂರಿ ಕಚೇರಿ ಹಾಗೂ ಇತರೆಡೆ ಕುಳಿತು ಫಾರಂ ವಿತರಿಸುತ್ತಿದ್ದಾರೆ ಎಂಬ ಗಂಭೀರ ದೂರುಗಳು ಕೇಳಿ ಬಂದಿವೆ.

ಇದರ ಬೆನ್ನಲ್ಲೇ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಐಎಎಸ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಜುಲೈ 2 ರಂದು ಬಂದಿರುವ ದೂರುಗಳನ್ನು ಆಧರಿಸಿ ಜುಲೈ 3 ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಡೆಪ್ಯುಟಿ ಕಮಿಷನರ್ಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಅಧಿಕೃತ ಸುತ್ತೋಲೆ ರವಾನಿಸಿರುವ ಸಿಇಒ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಹಾಗೂ ವೇಳಾಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಜೂನ್ 30 ರಿಂದಲೇ ಮತದಾರರಿಗೆ ಎನ್ಯೂಮರೇಶನ್ ಫಾರಂಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಫಾರಂ ಹಂಚುವ ಬದಲು, ಕಚೇರಿಗಳಲ್ಲೇ ಕುಳಿತು ವಿತರಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಸಿಇಒ ವಿ. ಅನ್ಬುಕುಮಾರ್, ‘ಎಲ್ಲಾ ಬಿಎಲ್ಒಗಳು ಕಡ್ಡಾಯವಾಗಿ ಪ್ರತಿಯೊಬ್ಬ ಮತದಾರನ ಮನೆ ಬಾಗಿಲಿಗೆ ಭೇಟಿ ನೀಡಿ ಫಾರಂ ವಿತರಿಸಬೇಕು. ವಿಶೇಷ ತೀವ್ರ ಪರಿಷ್ಕರಣೆಯ ಎಲ್ಲಾ ಹಂತಗಳಲ್ಲೂ ಇಸಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ಅಗತ್ಯ ನಿರ್ದೇಶನ ನೀಡಬೇಕು’ ಎಂದು ಆದೇಶಿಸಿದ್ದಾರೆ.ಇದೇ ವೇಳೆ, ಫಾರಂ ತುಂಬಲು ಕಷ್ಟಪಡುವ ಮತದಾರರು ‘ಮತದಾರರ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ನೆರವು ಪಡೆಯಬಹುದು, ಈ ಕೇಂದ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.

