ಉಳ್ಳಾಲ: ಉಳ್ಳಾಲ ತಾಲೂಕಿನ ನಾಟೆಕಲ್ ಸಮೀಪ ಪಿ.ಎ. ಕಾಲೇಜಿಗೆ ಸಂಬಂಧಿಸಿದ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರು ದುರ್ಮರಣಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತೀವ್ರ ನೋವು ತಂದಿದೆ.


ಈ ದುರ್ಘಟನೆಯ ಕುರಿತು ಆಳವಾದ ಸಂತಾಪ ವ್ಯಕ್ತಪಡಿಸಿರುವ NSUI ಉಳ್ಳಾಲ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಯು.ಟಿ. ಫರೀದ್ ಅವರು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿ, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
ಘಟನೆಯ ಬಳಿಕ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ವಿಶೇಷವಾಗಿ ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಕಾಲೇಜು ಬಸ್ಸುಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಚಾಲಕರ ಜವಾಬ್ದಾರಿಯುತ ವಾಹನ ಚಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಒಂದು ಕ್ಷಣದ ನಿರ್ಲಕ್ಷ್ಯ ಅಮೂಲ್ಯ ಜೀವವನ್ನೇ ಕಸಿದುಕೊಳ್ಳುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಂಬಂಧಪಟ್ಟ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಬೇಕು ವಿದ್ಯಾರ್ಥಿಗಳ ಸುರಕ್ಷತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ” ಎಂದು ಯು.ಟಿ. ಫರೀದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

