ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಮಂಗಳೂರು ವಿಧಾನಸಭಾ ಯುವ ಕಾಂಗ್ರೆಸ್‍ನ ಗ್ರಾಮ ಚಲೋ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರಕಾರದ ಹಲವಾರು ಯೋಜನೆಗಳನ್ನು, ಸರಕಾರಿ ಸೌಲಭ್ಯಗಳನ್ನು ತಲುಪಿಸುವಂತಹ ಕೆಲಸ ಪ್ರಾಮಾಣಿಕತೆಯಿಂದ ನಡೆಯಲಿದ್ದು, ಇಂತಹ ಸೇವೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಸಾಗಿಸುವಂತಾಗಬೇಕು ಎಂದು ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ಹೇಳಿದರು.
ಅವರು ಮಂಗಳೂರು ವಿಧಾನಸಭಾ ಯುವಕಾಂಗ್ರೆಸ್ ವತಿಯಿಂದ ನಡೆಯುವ `ಗ್ರಾಮ ಚಲೋ’ ಕಾರ್ಯಕ್ರಮಕ್ಕೆ ಭಾನುವಾರ ಅಸೈಗೋಳಿಯ ಲಯನ್ಸ್ ಕ್ಲಬ್‍ನಲ್ಲಿ ಚಾಲನೆ ನೀಡಿ ಮಾತನಾಡಿದರು.

ಇವತ್ತು ಸುಳ್ಳು ಭರವಸೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಪ್ಪು ಹಣವನ್ನು ವಾಸಪಸ್ಸು ತರಿಸಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರೂ ಇಷ್ಟರವರೆಗೂ 15 ರೂಪಾಯಿಯನ್ನು ಹಾಕಿಲ್ಲ. ಅವರು ವಿದೇಶದ ಕಪ್ಪು ಹಣ ತರಿಸುವುದು ಬಿಡಿ ಅವರೇ ವಿದೇಶದಲ್ಲಿ ಹೆಚ್ಚಿನ ದಿನವನ್ನು ಕಳೆಯುತ್ತಿದ್ದು ಅದರ ಬದಲಾಗಿ ಭಾರತದಲ್ಲಿ ಬಂದು ಜನಸೇವೆ ಮಾಡಲಿ ಎಂದರು.
ಎತ್ತಿನಹೊಳೆ ಯೋಜನೆಯ ಬಗ್ಗೆ ಬಿಜೆಪಿಯ ಸದಾನಂದ ಗೌಡರೇ ಮುನ್ನುಡಿಯಾಗಿದ್ದು ಇದೀಗ ಅದೇ ಪಕ್ಷದವರು ಹೋರಾಟಕ್ಕೆ ಇಳಿದಿದ್ದಾರೆ. ಹೋರಾಟದ ಬದಲು ವಿಪಕ್ಷದ ನಾಯಕರು ಸೇರಿ ಅಸ್ಲೆಂಬಿಯಲ್ಲಿ ಯಾಕೆ ಈ ಬಗ್ಗೆ ಚರ್ಚೆ ನಡೆಸುವುದಿಲ್ಲ. ಇದರಿಂದ ಅವರ ಎತ್ತಿನಹೊಳೆ ಯೋಜನೆಯ ಬಗ್ಗೆ ನಿಲುವನ್ನು ನಾವು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಯುವಕಾಂಗ್ರೆಸ್ ರಾಜ್ಯ ಸರಕಾರದ ಹಲವಾರು ಯೋಜನೆಗಳನ್ನು ಪ್ರತೀ ಹಳ್ಳಿ ಹಳ್ಳಿಗೂ ತಲುಪಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದು ಜನಪರವಾಗಿ ಕೆಲಸಮಾಡಲು ಇದು ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಪುರಸಭೆಯ ಮಾಜಿ ಸ್ಥಾಯಿಸಮಿತಿ ಸದಸ್ಯ ದಿನಕರ್ ರೈ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ, ಯುವಕಾಂಗ್ರೆಸ್‍ನ ಲುಕ್ಮಾನ್, ಜಿಲ್ಲಾ ಯುವಕಾಂಗ್ರೆಸ್‍ನ ಉಳ್ಳಾಲ ಪುರಸಭಾ ಉಪಾಧ್ಯಕ್ಷೆ ರಝಿಯಾ ಉಳ್ಳಾಲ, ಕೃಷ್ಣ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಬ್ಲಾಕ್‍ನ ಮಹಿಳಾ ಅಧ್ಯಕ್ಷೆ ಸುರೇಖ, ಶೀನ ಶೆಟ್ಟಿ, ಜಲೀಲ್ ಮೋಂಟುಗೋಳಿ, ನಾಸೀರ್ ನಡುಪದವು, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ, ರಪೀಕ್ ಅಂಬ್ಲಮೊಗರು, ಸಮೀರ್ ಪಜೀರು, ಚಂದ್ರಹಾಸ್ ರೈ, ಹಮೀದ್ ಹಸನ್, ಸುನೀಲ್ ಪೂಜಾರಿ, ಚಂದ್ರಹಾಸ್ ನಡುಪದವು, ಸಿದ್ದೀಕ್ ಪಾರೆ, ಪ್ರೇಮದಾಸ್ ಮುಂತಾದವರು ಉಪಸ್ಥಿತರಿದ್ದರು.
ನಝರ್ ಷಾ ಪಟ್ಟೋರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀರ್ ಪಜೀರು ಕಾರ್ಯಕ್ರಮ ನಿರೂಪಿಸಿದರು.









