ಹಿರಿಯ ಪತ್ರಕರ್ತ ಹಾಗೂ ರೈತಪರ ಹೋರಾಟಗಾರ ಲಕ್ಷ್ಮಣ್ ಹೂಗಾರ್ ಅವರು ಬಿಡದಿ ಟೌನ್ಶಿಪ್ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ವಿರುದ್ಧದ ಹೋರಾಟವು ಎಲ್ಲೋ ಒಂದೆಡೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ರಾಜಕೀಯದ ಮದಗಜಗಳೆಂದೇ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ಕೆಸರೆರಚಾಟ ಮತ್ತು ಪ್ರತಿಷ್ಠೆಯ ಹೋರಾಟದ ನಡುವೆ, ಸುಮಾರು 400ಕ್ಕೂ ಹೆಚ್ಚು ದಿನಗಳಿಂದ ತಮ್ಮ ಹಕ್ಕು ಮತ್ತು ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿರುವ ರೈತರ ನೈಜ ಸಮಸ್ಯೆಗಳು ಮರೆಯಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೈತರ ಹೋರಾಟದ ಮೂಲ ಉದ್ದೇಶವನ್ನು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರಕ್ಕೆ ಬಲಿಯಾಗಲು ಬಿಡಬಾರದು. ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ತಮ್ಮ ವೈಯಕ್ತಿಕ ಮತ್ತು ಪಕ್ಷೀಯ ಪ್ರತಿಷ್ಠೆಯನ್ನು ಬದಿಗಿಟ್ಟು, ಸಮಸ್ಯೆಯಿಂದ ನೇರವಾಗಿ ತೊಂದರೆ ಅನುಭವಿಸುತ್ತಿರುವ ರೈತರೊಂದಿಗೆ ಮುಕ್ತ ಹಾಗೂ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರವು ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದು, ಬಿಡದಿ ಟೌನ್ಶಿಪ್ ಯೋಜನೆ ಹಾಗೂ ರೈತರ ಆತಂಕಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು. ಜನರ ಬದುಕು ಮತ್ತು ಭೂಮಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ರಾಜಕೀಯ ಘರ್ಷಣೆಗಳಿಗಿಂತ ಶಾಶ್ವತ ಪರಿಹಾರವೇ ಮುಖ್ಯವಾಗಬೇಕು ಎಂದು ಅವರು ಹೇಳಿದ್ದಾರೆ.
“ದೂರದಿಂದ ಈ ಬೆಳವಣಿಗೆಗಳನ್ನು ಗಮನಿಸಿದಾಗ ಬೇಸರವಾಗುತ್ತದೆ. ರೈತರ ಹೋರಾಟದ ಬಗ್ಗೆ ನನಗೆ ಸಂಪೂರ್ಣ ಅನುಕಂಪ, ಸಹಾನುಭೂತಿ ಮತ್ತು ಬೆಂಬಲವಿದೆ. ವೈಯಕ್ತಿಕ ಕಾರಣಗಳಿಂದ ಇದುವರೆಗೆ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಶೀಘ್ರದಲ್ಲೇ ರೈತರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ” ಎಂದು ಲಕ್ಷ್ಮಣ್ ಹೂಗಾರ್ ತಿಳಿಸಿದ್ದಾರೆ.
ಬಿಡದಿ ಟೌನ್ಶಿಪ್ ವಿರೋಧಿ ಹೋರಾಟವು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲ, ರೈತರ ಭೂಹಕ್ಕು, ಜೀವನೋಪಾಯ ಮತ್ತು ನ್ಯಾಯಸಮ್ಮತ ಅಭಿವೃದ್ಧಿಯ ಪ್ರಶ್ನೆಯಾಗಿದ್ದು, ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂಬುದು ರೈತ ಸಮುದಾಯದ ಪ್ರಮುಖ ಆಗ್ರಹವಾಗಿದೆ.

