ಮಂಗಳೂರು : ಕಳೆದ ವರ್ಷ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಇಬ್ಬರು ಮಕ್ಕಳು, ಅತ್ತೆ ಹಾಗೂ ಎರಡೂ ಕಾಲುಗಳನ್ನು ಕಳೆದುಕೊಂಡು ಜೀವನದ ಕಠಿಣ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಅವರ ಮನೆಗೆ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿ ಧೈರ್ಯ ತುಂಬಿದರು.


ದುರಂತದ ಬಳಿಕ ಅಶ್ವಿನಿ ಅವರ ಕುಟುಂಬ ಎದುರಿಸುತ್ತಿರುವ ನೋವು, ಸಂಕಷ್ಟ ಮತ್ತು ಜೀವನ ಹೋರಾಟವನ್ನು ಆಲಿಸಿದ ಅವರು, ಸರ್ಕಾರದಿಂದ ದೊರಕಬೇಕಾದ ಎಲ್ಲಾ ನೆರವು, ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ತಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
“ನೀವು ಒಂಟಿಯಲ್ಲ. ನಿಮ್ಮ ನ್ಯಾಯದ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ. ಬದುಕನ್ನು ಮರುಕಟ್ಟಿಕೊಳ್ಳಲು ಅಗತ್ಯವಿರುವ ಪ್ರತಿಯೊಂದು ನೆರವಿಗೂ ನಾನು ಬೆಂಬಲವಾಗಿ ನಿಲ್ಲುತ್ತೇನೆ,” ಎಂದು ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಅಶ್ವಿನಿ ಅವರ ಆರೋಗ್ಯ, ಚಿಕಿತ್ಸೆ ಹಾಗೂ ಜೀವನೋಪಾಯದ ಕುರಿತು ಮಾಹಿತಿ ಪಡೆದ ಕಿಶೋರ್ ಕುಮಾರ್ ಪುತ್ತೂರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಇರುವ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಭೇಟಿಯ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಕುವತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು ಮತ್ತು ಮೋಹನ್ ರಾಜ್ ಕೆ.ಆರ್., ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುಮಲತಾ ಕೊಣಾಜೆ, ಶಕ್ತಿ ಕೇಂದ್ರ ಪ್ರಮುಖ್ ಸುಧಾಕರ ಗಟ್ಟಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


