ಮುಂಬಯಿ (ಬಂಟ್ವಾಳ), ಜೂ.12: ಕರ್ನಾಟಕ ಕರಾವಳಿಯ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ (83) ಅವರು ಇಂದು ನಿಧನರಾದರು.

ಕಾಸರಗೋಡು ಮೂಲದವರಾದ ಅವರು ಬಂಟ್ವಾಳ ಎಸ್‌ವಿಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಬಳಿಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಬಂಟ್ವಾಳದಲ್ಲಿ ದೀರ್ಘಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅವರು ಎಪ್ಪತ್ತರ ದಶಕದಲ್ಲಿ ‘ಬುಲೆಟ್ ಮೇಸ್ಟ್ರು’ ಎಂದೇ ಜನಪ್ರಿಯರಾಗಿದ್ದರು. ಉತ್ತಮ ವಾಗ್ಮಿಯಾಗಿದ್ದ ಅವರು ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರು.
ಪತ್ರಿಕಾರಂಗದಲ್ಲಿಯೂ ವಿಶಿಷ್ಟ ಛಾಪು ಮೂಡಿಸಿದ್ದ ಅವರು ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ನೇತ್ರಾವತಿ ವಾರ್ತೆ ದೈನಿಕವನ್ನು ಆರಂಭಿಸಿ ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು. ಜನವಾಹಿನಿ ದೈನಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು ತಮ್ಮ ಸರಳ, ನಿಷ್ಠುರ ಮತ್ತು ವಸ್ತುನಿಷ್ಠ ಬರವಣಿಗೆಯ ಮೂಲಕ ಪತ್ರಿಕಾರಂಗದಲ್ಲಿ ವಿಶಿಷ್ಟ ಗುರುತನ್ನು ಸಂಪಾದಿಸಿದ್ದರು.
ಬಂಟ್ವಾಳ ತಾಲೂಕು ಗ್ರಾಮೀಣ ಪತ್ರಕರ್ತರ ಸಂಘದ ಸ್ಥಾಪಕರಾಗಿದ್ದ ಅವರು ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರ ನವೆಂಬರ್ 12ರಂದು ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರೊ. ಕೆ. ಬಾಲಕೃಷ್ಣ ಗಟ್ಟಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಕೆಯುಡಬ್ಲ್ಯೂಜೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

