
ಹರೇಕಳ : ವಿಷಯ ಜ್ಞಾನವಿದ್ದು ಒಳ್ಳೆಯ ಬೋಧನೆಯೊಂದಿಗೆ ಮಕ್ಕಳ ಮನಸ್ಸನ್ನು ಗೆಲ್ಲುವ ಶಿಕ್ಷಕರು ಅತ್ಯುತ್ತಮ ಶಿಕ್ಷಕರಾಗುತ್ತಾರೆ. ಶಿಕ್ಷಕರು ಸಚ್ಚಾರಿತ್ಯವಂತರು ಸಂಸ್ಕಾರವಂತರು ಮತ್ತು ಹೃದಯವಂತರು ಆಗಿದ್ದು, ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಅಂತಹ ವ್ಯಕ್ತಿತ್ವವುಳ್ಳ ಶಿಕ್ಷಕರನ್ನು ಸಮಾಜ ಯಾವಾಗ್ಲೂ ನೆನಪಿಡುತ್ತದೆ ಮತ್ತು ಗೌರವಿಸುತ್ತದೆ. ಇಂತವರ ಸಾಲಿಗೆ ನಮ್ಮ ರವಿಶಂಕರ್ ಅವರು ಸೇರುತ್ತಾರೆ ಎಂದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ರವೀಂದ್ರ ರೈ ಕಳ್ಳಿಮಾರ್ ಅವರು ಅಭಿಪ್ರಾಯ ಪಟ್ಟರು.
ಇವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕರಾದ ರವಿಶಂಕರ್ ರಾವ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಆರ್ ಈಶ್ವರ್ ಇವರು ಶಿಕ್ಷಕರು ವೃತ್ತಿಯಲ್ಲಿ ಮಾತ್ರ ನಿವೃತ್ತಿ ಹೊಂದುವುದು, ಪ್ರವೃತ್ತಿಯಲ್ಲಿ ಶಿಕ್ಷಕರಾಗಿಯೇ ಉಳಿಯುತ್ತಾರೆ ಮತ್ತು ಸಮಾಜದ ಮಾರ್ಗದರ್ಶಕರಾಗಿರುತ್ತಾರೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಶೆಟ್ಟಿ ಮಂಚವುದಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಅಧ್ಯಕ್ಷರು ಕೆ ಎನ್ ಆಳ್ವ , ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರು, ಜಂಟಿ ವಿದ್ಯಾ ಸಂಸ್ಥೆಗಳ ಸಂಚಾಲಕರು ಆಗಿರುವ ಕಡೆಂಜ ಸೋಮಶೇಖರ ಚೌಟ , ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿರುವ ಜಗಜೀವನ್ ಶೆಟ್ಟಿ ಕಡೆಂಜ, ಉದಯಕುಮಾರ್ ಚೌಟ ಕಡೆಂಜ, ದುರ್ಗ ಪ್ರಸಾದ್ ರೈ ಕಲ್ಲಾಯಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲಕೃಷ್ಣ ಭಂಡಾರಿ, ಸಮಾಜ ಸೇವಕರಾದ ಕಡೆಂಜ ಅಶೋಕ್ ಕುಮಾರ್ ಚೌಟ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಅಬ್ದುಲ್ ಮಜೀದ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಮುಂತಾದವರು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು ಡಾ . ಪ್ರಶಾಂತ್ ನಾಯ್ಕ್ , ಡಾ. ನರಸಿಂಹಯ್ಯ , ನಿವೃತ್ತ ಮುಖ್ಯ ಶಿಕ್ಷಕರು ಆನಂದ ಕೆ ಅಸೈಗೋಳಿ, ಫಾತಿಮಾ ರಫೀದ, ಶಿಕ್ಷಕರುಗಳಾದ ಕೃಷ್ಣಶಾಸ್ತ್ರೀ, ಶಿವಣ್ಣ, ಮುಂತಾದವರು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಹಾಗು ಶಾಲಾ ವಿದ್ಯಾರ್ಥಿಗಳು ಸ್ವ ರಚಿತ ಹಾಡುಗಳನ್ನು ಹಾಡಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮೋಹಿನಿ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಭವ್ಯ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

