ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದಲ್ಲಿ ನಡೆಯುತ್ತಿರುವ ನೇತ್ರಾವತಿ ಡ್ಯಾಮ್ ಅಜೀರ್ ಉಳಿಯದಿಂದ ಪಾವೂರು ದೊಡ್ಡ ರಸ್ತೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಕುರಿತು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಸವಿಸ್ತಾರ ಮನವಿಯನ್ನು ಸಲ್ಲಿಸಿದ್ದು, ಕಾಮಗಾರಿಯ ತಾಂತ್ರಿಕ ಗುಣಮಟ್ಟ, ಸುರಕ್ಷತೆ, ಭೂಸ್ವಾಧೀನ, ಪರಿಸರ ನಿಯಮಗಳ ಪಾಲನೆ ಹಾಗೂ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.



ಪಾವೂರು ಗ್ರಾಮದ ರಾಧಾಕೃಷ್ಣ ಪೂಜಾರಿ ಹಾಗೂ ಗ್ರಾಮಸ್ಥರ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನುಬದ್ಧತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಗ್ರಾಮಸ್ಥರ ಪ್ರಕಾರ, ರಸ್ತೆ ನಿರ್ಮಾಣವಾಗುತ್ತಿರುವ ಪ್ರದೇಶವು ನೇತ್ರಾವತಿ ನದಿಯ ತೀರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದ ನೀರಿನಿಂದ ಆವೃತವಾಗುವ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಯಾವುದೇ ರಕ್ಷಣಾ ಗೋಡೆ ಅಥವಾ ತಡೆಗೋಡೆ ನಿರ್ಮಿಸದೆ ಮಣ್ಣಿನ ರಸ್ತೆ ನಿರ್ಮಾಣ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.


ಒಂದು ವೇಳೆ ಭವಿಷ್ಯದಲ್ಲಿ ಪ್ರವಾಹ ಅಥವಾ ಭಾರೀ ಮಳೆಯಿಂದ ರಸ್ತೆ ಕೊಚ್ಚಿಹೋಗಿ ಸಾರ್ವಜನಿಕರ ಜೀವ ಅಥವಾ ಆಸ್ತಿಪಾಸ್ತಿಗೆ ಹಾನಿಯಾದರೆ, ಅದರ ಹೊಣೆಗಾರಿಕೆಯನ್ನು ಯಾರು ವಹಿಸಲಿದ್ದಾರೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರಸ್ತೆ ನಿರ್ಮಾಣದ ವೇಳೆ ಭಾರತೀಯ ರಸ್ತೆ ಕಾಂಗ್ರೆಸ್ (IRC), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಸೇರಿದಂತೆ ಸಂಬಂಧಿತ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ರಸ್ತೆಯ ಅಗಲ, ಮಳೆನೀರು ಹರಿದು ಹೋಗಲು ವೈಜ್ಞಾನಿಕ ಚರಂಡಿ ವ್ಯವಸ್ಥೆ, ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳು ಹಾಗೂ ರಸ್ತೆಯ ಬಾಳಿಕೆ ಅವಧಿ ಕುರಿತು ತಾಂತ್ರಿಕ ವರದಿ ಮತ್ತು ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಕಾಮಗಾರಿ ಯಾವ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿದೆ, ಇದಕ್ಕೆ ಯಾವ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ ಹಾಗೂ ಸಂಬಂಧಿತ ಆಡಳಿತಾತ್ಮಕ ಮಂಜೂರಾತಿ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ನೀಡುವಂತೆ ಆಗ್ರಹಿಸಲಾಗಿದೆ.
ರಸ್ತೆ ನಿರ್ಮಾಣವಾಗುತ್ತಿರುವ ಜಾಗದ ಮಾಲೀಕತ್ವದ ಕುರಿತೂ ಗ್ರಾಮಸ್ಥರು ಪ್ರಶ್ನೆ ಎತ್ತಿದ್ದಾರೆ. ಜಾಗವು ಸಂಪೂರ್ಣ ಸರ್ಕಾರಿ ಭೂಮಿಯೇ ಅಥವಾ ಖಾಸಗಿ ವ್ಯಕ್ತಿಗಳ ಮಾಲೀಕತ್ವದಲ್ಲಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದರೆ, ಭೂಸ್ವಾಧೀನ ಅಥವಾ ಜಮೀನು ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಸ್ತೆ ಭರ್ತಿಗಾಗಿ ಬಳಸಲಾಗುತ್ತಿರುವ ಮಣ್ಣಿನ ಮೂಲದ ಕುರಿತೂ ಗ್ರಾಮಸ್ಥರು ಮಾಹಿತಿ ಕೇಳಿದ್ದಾರೆ. ಬೇರೆಡೆ ಇರುವ ಗುಡ್ಡ ಅಥವಾ ಬೆಟ್ಟಗಳನ್ನು ಕಡಿದು ಮಣ್ಣು ತರಲಾಗುತ್ತಿದ್ದರೆ, ಅದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆದಿದ್ದಾರೆಯೇ, ಸರ್ಕಾರಕ್ಕೆ ಪಾವತಿಸಬೇಕಾದ ರಾಯಲ್ಟಿ ಪಾವತಿಸಲಾಗಿದೆಯೇ ಹಾಗೂ ಕಂದಾಯ ಇಲಾಖೆ ಮತ್ತು ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆಯ ಅನುಮತಿಗಳನ್ನು ಪಡೆದಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮಸ್ಥರು ವಿಶೇಷವಾಗಿ ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಕಾಮಗಾರಿಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ಪಾರದರ್ಶಕ ಸಾರ್ವಜನಿಕ ಖರೀದಿ ಕಾಯ್ದೆ 1999ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕಾಮಗಾರಿ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಿ ಯೋಜನೆಯ ಹೆಸರು, ಮಂಜೂರಾದ ಮೊತ್ತ, ಖರ್ಚಾದ ಮೊತ್ತ, ಕಾಮಗಾರಿ ಅವಧಿ, ಸಂಬಂಧಿತ ಇಂಜಿನಿಯರ್, ಜವಾಬ್ದಾರಿ ಅಧಿಕಾರಿ ಹಾಗೂ ಗುತ್ತಿಗೆದಾರರ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮನವಿಯ ಉದ್ದೇಶ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವುದಲ್ಲ, ಬದಲಾಗಿ ಸಾರ್ವಜನಿಕ ಹಣದ ಸಮರ್ಪಕ ಬಳಕೆ, ಕಾಮಗಾರಿಯ ಗುಣಮಟ್ಟ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಹಣದಿಂದ ನಡೆಯುವ ಪ್ರತಿಯೊಂದು ಕಾಮಗಾರಿಯೂ ಕಾನೂನುಬದ್ಧವಾಗಿ, ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ನಡೆಯಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
ಗ್ರಾಮಸ್ಥರ ಈ ಮನವಿಗೆ ಸಂಬಂಧಿಸಿದಂತೆ ಪಾವೂರು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆಗಳು ದಾಖಲೆ ಸಮೇತ ಉತ್ತರ ನೀಡಿ ಸಾರ್ವಜನಿಕರ ಅನುಮಾನಗಳಿಗೆ ತೆರೆ ಎಳೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

