ಉಳ್ಳಾಲ, ಜೂನ್ 8: ಗ್ರಾಮಸ್ಥರ ಒಗ್ಗಟ್ಟು ಮತ್ತು ಸಹಕಾರದಿಂದಲೇ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಒಂದು ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಅಂಬ್ಲಮೊಗರು ಗ್ರಾಮ ಇಂದು ನೀರು, ರಸ್ತೆ ಹಾಗೂ ವಿದ್ಯುತ್ ಸೌಲಭ್ಯಗಳಲ್ಲಿ ಸ್ವಾವಲಂಬಿಯಾಗಿರುವುದು ಸಂತಸದ ಸಂಗತಿ. ದ್ವೇಷಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿರುವ ಅಂಬ್ಲಮೊಗರು ಸಮಾಜವನ್ನು ದುಷ್ಟಶಕ್ತಿಗಳಿಂದ ಮುಕ್ತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಅಂಬ್ಲಮೊಗರು ಗ್ರಾಮದ ಕುಂಡೂರು ನುಸ್ರತುಲ್ ಇಸ್ಲಾಂ ಸಮಿತಿಯ ವತಿಯಿಂದ ಅಂಬ್ಲಮೊಗರು ಜಂಕ್ಷನ್‌ನಲ್ಲಿ ನಿರ್ಮಿಸಲಾದ ಕುಂಡೂರು ಜಮಾ ಮಸೀದಿ ಹಾಗೂ ಅಸ್ಸಯ್ಯಿದ್ ಮುಹಮ್ಮದ್ ರಿಫಾಯಿ ಅಲ್ ಬುಖಾರಿ ದರ್ಗಾದ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 15 ವರ್ಷಗಳಲ್ಲಿ ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ಇದೀಗ ಮಸೀದಿ ಹಾಗೂ ದರ್ಗಾಕ್ಕೆ ನಿರ್ಮಿಸಲಾದ ಭವ್ಯ ಪ್ರವೇಶ ದ್ವಾರ ಅಂಬ್ಲಮೊಗರು ಗ್ರಾಮದ ಕಿರೀಟದಂತಾಗಿದೆ. ಮುಂದಿನ ದಿನಗಳಲ್ಲಿ ಅಂಬ್ಲಮೊಗರು–ಬಜಾಲ್ ಸೇತುವೆ ನಿರ್ಮಾಣ ಯೋಜನೆಯನ್ನು ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ವಹಿಸಿದ್ದರು. ಖತೀಬ್ ಅಶ್ರಫ್ ಸಅದಿ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಹಿರಿಯರಾದ ಸುದರ್ಶನ್ ಶೆಟ್ಟಿ, ಕಾಂತಪ್ಪ ಪೂಜಾರಿ, ವಿಠಲ ಶೆಟ್ಟಿ, ರವಿರಾಜ್ ಶೆಟ್ಟಿ, ಸುಭೋದ್ ಶೆಟ್ಟಿ, ಸಿ.ಎಂ. ರವೂಫ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನುಸ್ರತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

