ಕೋಟೆಕಾರು, ಜೂನ್ 5: ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಅನ್ವಯ ನಾಲ್ಕು ವಿಧದ ತ್ಯಾಜ್ಯ ವಿಂಗಡಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯಿತು.



ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು. ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ತ್ಯಾಜ್ಯಗಳ ಸಮರ್ಪಕ ವಿಂಗಡಣೆಯ ಮಹತ್ವದ ಕುರಿತು ಆರೋಗ್ಯ ನಿರೀಕ್ಷಕರು ಮಾಹಿತಿ ನೀಡಿದರು. ಮನೆಮನೆಗಳಲ್ಲಿ ತ್ಯಾಜ್ಯವನ್ನು ಒಣ, ತೇವ, ಸ್ಯಾನಿಟರಿ ಹಾಗೂ ಅಪಾಯಕಾರಿ ತ್ಯಾಜ್ಯಗಳಾಗಿ ಪ್ರತ್ಯೇಕಿಸುವ ಅಗತ್ಯವನ್ನು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸದಸ್ಯರಾದ ಶ್ರೀ ಉದಯಕುಮಾರ್ ಶೆಟ್ಟಿ ಹಾಗೂ ಸೇಲಿಮಾಬೀ, ಮುಖ್ಯಾಧಿಕಾರಿ ಮಾಲಿನಿ, ಪಂಚಾಯತ್ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

