ಕುಂಪಲ: ಕುಂಪಲ, ಪಿಲಾರ್, ಅಂಬಿಕಾರೋಡ್ ಹಾಗೂ ಕಾಪಿಕಾಡ್ ಭಾಗದ ವಾಹನ ಸವಾರರು ಇಂದಿನಿಂದ ಹೆಚ್ಚುವರಿ ಸಂಚಾರ ಸಮಸ್ಯೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಭೀತಿಯನ್ನು ಎದುರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಎಸ್. ಕುಂಪಲ ಅಭಿಪ್ರಾಯಪಟ್ಟಿದ್ದಾರೆ.
ಕುಂಪಲದಿಂದ ಓವರ್ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಸಮರ್ಪಕ ಸರ್ವಿಸ್ ರಸ್ತೆ ಇಲ್ಲದ ಕಾರಣ ಅನಗತ್ಯವಾಗಿ ಸುತ್ತುವ ಮಾರ್ಗ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂಪಲದಿಂದ ಕಾಪಿಕಾಡ್ ಸಂಪರ್ಕಿಸುವ ಕೇವಲ ಕಾಲು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲು ಅವಕಾಶವಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು ಹಾಗೂ ವ್ಯಾಪಾರ ಸಂಕೀರ್ಣಗಳ ಸುತ್ತ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದರೂ, ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ಕುಂಪಲ, ಪಿಲಾರ್ ಹಾಗೂ ಕಾಪಿಕಾಡ್ ಭಾಗದ ವಾಹನ ಸವಾರರು ತೊಕ್ಕೊಟ್ಟಿಗೆ ತಲುಪಲು ಸಾಮಾನ್ಯವಾಗಿ ಅರ್ಧ ಕಿಲೋಮೀಟರ್ಗಿಂತ ಕಡಿಮೆ ದೂರ ಕ್ರಮಿಸಬೇಕಾದರೆ, ಈಗ ಸುಮಾರು ಎರಡು ಕಿಲೋಮೀಟರ್ ಸುತ್ತುವ ಮಾರ್ಗ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಪ್ರಯಾಣದ ಸಮಯ ಹೆಚ್ಚುವುದರ ಜೊತೆಗೆ ಇಂಧನ ವೆಚ್ಚವೂ ಏರಿಕೆಯಾಗಿದೆ.
ಇದರ ಪರಿಣಾಮವಾಗಿ ಆಟೋ ರಿಕ್ಷಾ ಪ್ರಯಾಣಿಕರ ಮೇಲೂ ಹೆಚ್ಚುವರಿ ಬಾಡಿಗೆಯ ಹೊರೆ ಬೀಳುತ್ತಿದೆ. ಸಾಮಾನ್ಯ ಜನರ ಸಂಚಾರ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಸಮಸ್ಯೆ ಮತ್ತಷ್ಟು ತೊಂದರೆ ಉಂಟುಮಾಡುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಂಪಲದಿಂದ ಕಾಪಿಕಾಡ್ವರೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ, ಸಂಚಾರ ಅಸ್ತವ್ಯಸ್ತತೆ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರವೀಣ್ ಎಸ್. ಕುಂಪಲ ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕುಂಪಲ–ಕಾಪಿಕಾಡ್ ಸಂಪರ್ಕ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಇದೀಗ ಸ್ಥಳೀಯರಲ್ಲಿ ಮತ್ತೊಮ್ಮೆ ಬಲವಾಗಿ ಕೇಳಿಬರುತ್ತಿದೆ.

