
ಉಳ್ಳಾಲ: ರಂಗ ಮಂದಿರವನ್ನು ಕೊಡುಗೆಯಾಗಿ ನೀಡಿರುವುದು ಅಂಬ್ಲಮೊಗರಿನ ಊರವರಿಗೆ ಶಾಲಾ ಮಕ್ಕಳಿಗೆ ಬಹುದೊಡ್ಡ ಸೊತ್ತಾಗಿದೆ. ವಿದ್ಯಾ ಕೇಂದ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾದಲ್ಲಿ ಮಾತ್ರ ಗ್ರಾಮ ಅಭಿವೃದ್ಧಿಯಾಗುವುದು. ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕರ ತಂಡದ ಕಾರ್ಯ ಶ್ಲಾಘನೀಯವಾದುದು. ಮುಖ್ಯೋಪಾಧ್ಯಾಯರ ಶ್ರಮ ಜೀವನದಿಂದಲೇ ಶಾಲೆ ಅಭಿವೃದ್ಧಿ ಮಟ್ಟವನ್ನು ಏರಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸ್ಥಳದಾನಿ ಪಡ್ಯಾರಮನೆ ರಾಮಕ್ಕ ಪಕೀರ ಶೆಟ್ಟಿ ಅವರ ಸ್ಮರಣಾರ್ಥ ಅವರ ಮಕ್ಕಳಾದ ಪಡ್ಯಾರಮನೆ ಆನಂದ ಶೆಟ್ಟಿ ಮುಂಬೈ, ಸದಾಶಿವ ಶೆಟ್ಟಿ ಕಡೆಂಜ ಹಾಗೂ ವಿಠಲ ಶೆಟ್ಟಿ ಬೆಂಗಳೂರು ಅವರ ಕೊಡುಗೆಯಾಗಿ ನಿರ್ಮಿಸಿದ ಶಾಲಾ ರಂಗಮಂದಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಳ್ಳಾಲ ತಾಲೂಕು ಅಧ್ಯಕ್ಷ ಮಹಮ್ಮದ್ ರಫೀಕ್ ಅಂಬ್ಲಮೊಗರು ಮಾತನಾಡಿ, ಅಂಬ್ಲಮೊಗರು ಶಾಲೆಗೂ ಬಂಟ ಸಮುದಾಯಕ್ಕೂ ಬಹಳಷ್ಟಿದೆ ನಂಟಿದೆ. ೧೦೦ ವರ್ಷಗಳ ಹಿಂದೆ ಸ್ಥಾಪನೆಯಾದ ಸರಕಾರಿ ಶಾಲೆಗೆ ಜಾಗವನ್ನು, ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟ ಮಹನೀಯರ ಹೆಸರಿನಲ್ಲಿ ಈಗಲೂ ದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಹೆತ್ತವರ ಕಲಿಸಿಕೊಟ್ಟ ಸಂಸ್ಕೃತಿಯಿಂದಾಗಿ ರಾಮಕ್ಕ ಪಕೀರ ಶೆಟ್ಟಿ ಇವರ ಮಕ್ಕಳು ರೂ. ೭ ಲಕ್ಷ ವೆಚ್ಛದ ರಂಗಮಂದಿರವನ್ನು ನಿರ್ಮಿಸಿಕೊಟ್ಟಿದ್ದಾರೆ. ವೇದಿಕೆ ಪರಿಪೂರ್ಣವಿದ್ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯನ್ನು ನೆನಪಿಸಲು ಸಾಧ್ಯವಾಗುವುದು. ಶಿಕ್ಷಣದ ಅಭಿವೃದ್ಧಿಗೆ ದಾನಿಗಳ ಕೊಡುಗೆ ಅಮೂಲ್ಯವಾಗಿದ್ದು, ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಮಾಜದ ಸಹಕಾರ ಅಗತ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ್ ಮಾತನಾಡಿ, ಅಂಬ್ಲಮೊಗರು ಶಾಲೆ ಉಳ್ಳಾಲ ತಾಲೂಕಿನಲ್ಲೇ ಹೆಸರುವಾಸಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಿಂದ ಹಲವು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿರುವ ಯೋಜನೆಗಳಿಂದಾಗಿ ಹೆಚ್ಚಿನ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಗುಣಾತ್ಮಕ ಶಿಕ್ಷಕರಿಂದ ಮಕ್ಕಳಿಗೆ ಸೇವೆಯನ್ನು ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಕಲಿಕೆಯ ಶಿಕ್ಷಣವನ್ನು ಒದಗಿಸುವ ಯೋಜನೆಯನ್ನು ಸರಕಾರ ರೂಪಿಸಿದೆ ಎಂದರು.
ಈ ಸಂದರ್ಭದಲ್ಲಿ ೩೧ ವರ್ಷ ೮ ತಿಂಗಳುಗಳ ಕಾಲ ದೈಹಿಕ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜೋಸ್ಟಿನ್ ಡಿಸೋಜ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಶಾಲೆಯ ಬೆಳವಣಿಗೆಗೆ ಅವರು ಸಲ್ಲಿಸಿದ ಸೇವೆಯನ್ನು ಗಣ್ಯರು ಸ್ಮರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಆನಂದ ಶೆಟ್ಟಿ, ಸದಾಶಿವ ಶೆಟ್ಟಿ ಹಾಗೂ ವಿಠಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ದಕ್ಷಿಣ ವಲಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಧಾಕೃಷ್ಣ ರಾವ್ , ಕಾರ್ಯದರ್ಶಿ ಮೋಹನ್ ಶಿರ್ಲಾಲ್ , ಕಟ್ಟಡದ ಗುತ್ತಿಗೆದಾರ ಅಶ್ರಫ್, ದೈಹಿಕ ಶಿಕ್ಷಣ ಶೀಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ತ್ಯಾಗಂ ಹರೇಕಳ ಇವರುಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬುಸಾಲಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ, ವಿಠಲ್ ಶೆಟ್ಟಿ ಬಸ್ತಿಕಟ್ಟೆ , ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಯಶೀಲ ಶೆಟ್ಟಿ, ಮೀಂಜ ಮಂಗಲ್ಪಾಡಿ ಕೋಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಗ್ರಾ.ಪಂ ಮಾಜಿ ಸದಸ್ಯರಾದ ಸುಬೋದ್ ಶೆಟ್ಟಿ, ಹೆಲೆನ್ ಡಿಸೋಜ, ಮಾಜಿ ಉಪಾಧ್ಯಕ್ಷೆ ಮುಮ್ತಾಝ್, ನಿವೃತ್ತರಾದ ಇಂದಿರಾ, ಗೀತಾ ನಾಯಕ್, ಜಾರ್ಜ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.
ಶಾಲಾ ಮುಖ್ಯಶಿಕ್ಷಕ ಜಗದೀಶ್ ಶೆಟ್ಟಿ ಎಲಿಯಾನ ಸ್ವಾಗತಿಸಿದರು. ಶಿಕ್ಷಕಿ ನಳಿನಾಕ್ಷಿ ನಿರೂಪಿಸಿದರು. ಸಹಶಿಕ್ಷಕಿ ಶ್ವೇತಾ ಎಂ ಪೈ ವಂದಿಸಿದರು.


