ಗಡಿ ಪ್ರದೇಶದ ಪುಟ್ಟ ಊರಾದ ವರ್ಕಾಡಿ–ಪಾವಳದಲ್ಲಿ ಜನಿಸಿ ಬೆಳೆದ ಹಮೀದ್ ಪಾವಳ ಅವರು ಕಳೆದ 16 ವರ್ಷಗಳಿಂದ ಪೊಲೀಸ್ ಹಾಗೂ ಹೋಂ ಗಾರ್ಡ್ ಇಲಾಖೆಯಲ್ಲಿ ನಿಷ್ಠೆ, ಶಿಸ್ತು ಮತ್ತು ಸೇವಾಭಾವದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.







ಟ್ರಾಫಿಕ್ ನಿಯಂತ್ರಣ, ಬಂದೋಬಸ್ತು ಕರ್ತವ್ಯ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯ, ಚುನಾವಣಾ ಕರ್ತವ್ಯಗಳು ಸೇರಿದಂತೆ ಜನಸೇವೆಯ ಪ್ರತಿಯೊಂದು ಹಂತದಲ್ಲೂ ಸದಾ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿರುವ ಹಮೀದ್ ಪಾವಳ ಅವರು, ಸಾರ್ವಜನಿಕ ವಲಯದಲ್ಲಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ.
ಅವರ ಸೇವಾ ನಿಷ್ಠೆಗೆ ಸಾಕ್ಷಿಯಾಗಿ ಈಗಾಗಲೇ 116ಕ್ಕೂ ಅಧಿಕ ಸನ್ಮಾನಗಳು ದೊರೆತಿವೆ. ಪೊಲೀಸ್ ಕಮಿಷನರ್ ಸಂಧೀಪ್ ಪಟೇಲ್, ಡಿಸಿಪಿ, ಎಸಿಪಿ ಹಾಗೂ ಹೋಂ ಗಾರ್ಡ್ ಇಲಾಖೆಯಿಂದ ಅನೇಕ ಪ್ರಶಂಸಾಪತ್ರಗಳು ಮತ್ತು ಗೌರವಗಳು ಅವರಿಗೆ ಲಭಿಸಿರುವುದು ಅವರ ಸೇವೆಯ ಮಹತ್ವವನ್ನು ಸಾರುತ್ತದೆ.




ಸಾಮಾನ್ಯ ಕುಟುಂಬದಿoದ ಬಂದರೂ ಸಮಾಜ ಸೇವೆಯನ್ನೇ ಧ್ಯೇಯವನ್ನಾಗಿ ಮಾಡಿಕೊಂಡು ದುಡಿಯುತ್ತಿರುವ ಹಮೀದ್ ಪಾವಳ ಅವರಂತಹ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರ್ಕಾರ ಮತ್ತು ಜಿಲ್ಲಾಡಳಿತದ ಹೊಣೆಗಾರಿಕೆಯಾಗಿದೆ. ಇಷ್ಟೊಂದು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದರೂ ರಾಜ್ಯೋತ್ಸವ ಪ್ರಶಸ್ತಿಯಂತಹ ಗೌರವಗಳಿಗೆ ಇವರ ಹೆಸರು ಪರಿಗಣನೆಗೆ ಬರದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಹುಟ್ಟಿಸಿದೆ.
ಸಮಾಜದ ಭದ್ರತೆ, ಶಾಂತಿ ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿರುವ ಹಮೀದ್ ಪಾವಳ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಉನ್ನತ ಮಟ್ಟದ ಗೌರವಗಳು ದೊರೆಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇಂತಹ ಸೇವಾಮೂರ್ತಿಗಳಿಗೆ ಸರಿಯಾದ ಮಾನ್ಯತೆ ದೊರೆತಾಗ ಮಾತ್ರ ಸಮಾಜ ಸೇವೆಗೆ ಮತ್ತಷ್ಟು ಪ್ರೇರಣೆ ಸಿಗಲಿದೆ.

