ಮಂಗಳೂರು: ನೇತ್ರಾವತಿ ಮತ್ತು ಫಲ್ಗುಣಿ ನದಿ ತೀರದ CRZ-I ಹಾಗೂ CRZ-II ಪ್ರದೇಶಗಳಲ್ಲಿ ನಡೆದಿರುವ ಕರಾವಳಿ ನಿಯಂತ್ರಣ ವಲಯ (CRZ) ಉಲ್ಲಂಘನೆ ಕುರಿತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ.) ಕಾರ್ಯದರ್ಶಿಗಳು 21/11/2025 ರಂದು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದ ಹಿನ್ನೆಲೆ ಇದೀಗ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.

ಸಚಿವಾಲಯವು 30/09/2022 ರಂದು ಹೊರಡಿಸಿದ್ದ ಅಧಿಸೂಚನೆಯ ಮೂಲಕ, ಪರಿಸರ (ಸಂರಕ್ಷಣೆ) ಕಾಯ್ದೆ 1986ರ ಕಲಂ 5, 10 ಮತ್ತು 19ರಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳಿಗೆ (CZMA) CRZ ಅಧಿಸೂಚನೆಯ ನಿಯಮಗಳನ್ನು ಜಾರಿಗೆ ತರುವುದು ಮತ್ತು ಅದರ ಅನುಸರಣೆ ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈಗಾಗಲೇ ನೀಡಲಾಗಿದೆ ಅದರೂ CRZ ಕಾನೂನನ್ನು ಉಲ್ಲಂಘಿಸಿದ ಘಟನೆ ಮಂಗಳೂರು ನಲ್ಲಿ ನಡೆದಿದೆ ಇದಕ್ಕೆ ಹೊಣೆ ಯಾರೂ ಎಂದು ಲಿಖಿತ ಪತ್ರದ ಮೂಲಕ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ತನ್ನ ದೂರಿನಲ್ಲಿ ಉಲ್ಲೇಖಿಸಿತ್ತು.
ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (KSCZMA), ಅರಣ್ಯ, ಪರಿಸರ ಮತ್ತು ಪರಿಸರಶಾಸ್ತ್ರ ಇಲಾಖೆಗೆ ಪತ್ರ ಬರೆದಿದ್ದರೂ, ನೇತ್ರಾವತಿ ಮತ್ತು ಫಲ್ಗುಣಿ ನದಿ ತೀರದ CRZ-I ಮತ್ತು CRZ-II ಪ್ರದೇಶಗಳಲ್ಲಿ ನಿರಂತರವಾಗಿ ಉಲ್ಲಂಘನೆಗಳು ನಡೆದಿವೆ ಎಂದು NECF ಆರೋಪಿಸಿದೆ.
ಜಿಲ್ಲೆಯ CRZ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ, ದೆಹಲಿಯಲ್ಲಿರುವ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ IA.III ವಿಭಾಗ (CRZ) ಮುಖ್ಯಾಲಯವು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (KSCZMA) ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆದಿದೆ.
ಪ್ರಕರಣದ ಸ್ವರೂಪ ಮತ್ತು ವ್ಯಾಪ್ತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅರ್ಜಿದಾರರಿಗೆ ನೇರವಾಗಿ ವಿವರವಾದ ಉತ್ತರವನ್ನು ಕಳುಹಿಸುವಂತೆ ಹಾಗೂ ಅದರ ಪ್ರತಿಯನ್ನು ತುರ್ತಾಗಿ ಕೇಂದ್ರ ಸಚಿವಾಲಯಕ್ಕೂ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪರಿಸರ ಕಾಳಜಿ ಒಕ್ಕೂಟ (NECF) ಮಾಧ್ಯಮ ವಕ್ತಾರರು, “ರಾಜ್ಯ ಸರ್ಕಾರ ಮತ್ತು ದ.ಕ ಜಿಲ್ಲಾಡಳಿತ ಇದೀಗ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.

