ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಕೊಣಾಜೆ ಗ್ರಾಮ ಪಂಚಾಯತ್ ವಿಶ್ವವಿದ್ಯಾಲಯಕ್ಕೆ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿರುವ ಘಟನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹತ್ತು ದಿನಗಳೊಳಗೆ ₹25,000 ದಂಡ ಪಾವತಿಸುವಂತೆ ನೀಡಿರುವ ಸೂಚನೆ, ವಿಶ್ವವಿದ್ಯಾಲಯದ ಆಡಳಿತದ ಕಾರ್ಯವೈಖರಿಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.

ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮಂಗಳೂರು ವಿಶ್ವವಿದ್ಯಾಲಯವೇ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವುದು ವಿಷಾದನೀಯ. ವಿದ್ಯಾರ್ಥಿಗಳ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕಾದ ಆಡಳಿತ ಮಂಡಳಿ ಮತ್ತು ಸಿಂಡಿಕೇಟ್ ಸದಸ್ಯರು ಮೌನವಾಗಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಹಿತಾಸಕ್ತಿ ಕುರಿತು ಸದಾ ಮಾತನಾಡುವ ಸಂಘಟನೆಗಳು ಈ ವಿಚಾರದಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ವಿದ್ಯಾರ್ಥಿಗಳು ಅಸ್ವಸ್ಥರಾದರೆ ಅಥವಾ ಪರಿಸರ ಸಮಸ್ಯೆಯಿಂದ ತೊಂದರೆ ಅನುಭವಿಸಿದರೆ ಅದರ ಹೊಣೆ ಯಾರು ಹೊರುತ್ತಾರೆ?
ಒಂದು ವಿಶ್ವವಿದ್ಯಾಲಯ ಕೇವಲ ಕಟ್ಟಡಗಳ ಸಮೂಹವಲ್ಲ; ಅದು ಸಮಾಜದ ಭವಿಷ್ಯ ರೂಪುಗೊಳ್ಳುವ ಕೇಂದ್ರ. ಅಲ್ಲಿ ಸ್ವಚ್ಛತೆ ಮತ್ತು ಆರೋಗ್ಯದಂತಹ ಮೂಲಭೂತ ವಿಚಾರಗಳನ್ನೇ ನಿರ್ಲಕ್ಷಿಸಿದರೆ, ಶಿಕ್ಷಣದ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎಂಬುದನ್ನು ಆಡಳಿತ ಅರಿತುಕೊಳ್ಳಬೇಕಾಗಿದೆ.

