ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗಾಗಿ ಕರಾವಳಿ ಜನತೆ ಮತ್ತು ವಕೀಲ ಸಮುದಾಯ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಈ ಬೇಡಿಕೆಗೆ ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ ನೀಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಮಹತ್ವದ ಬೆಳವಣಿಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಕೀಲ ನೀತಿನ್ ಕುತ್ತಾರ್ ಅಭಿಪ್ರಾಯಪಟ್ಟಿದ್ದಾರೆ.


ಈ ಹೋರಾಟದ ಮೊದಲ ಹಂತದ ಗೆಲುವಿಗೆ ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಹಾಗೂ ಸರ್ಕಾರವನ್ನು ಮನವರಿಕೆ ಮಾಡಲು ಶ್ರಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅಭಿನಂದನಾರ್ಹರು ಎಂದು ಅವರು ಹೇಳಿದ್ದಾರೆ.
ಆದರೆ, ಈ ಹೋರಾಟ ಯಶಸ್ವಿಯಾಗುವುದಿಲ್ಲವೆಂದು ಭಾವಿಸಿ ಕೇವಲ ನೆಪಮಾತ್ರದ ಬೆಂಬಲ ನೀಡಿದ್ದ ಕರಾವಳಿಯ ಕೆಲವು ಬಿಜೆಪಿ ನಾಯಕರು ಈಗ ಮೌನ ವಹಿಸಿರುವುದು ಜನರಲ್ಲಿ ಪ್ರಶ್ನೆ ಹುಟ್ಟಿಸಿದೆ ಎಂದು ನೀತಿನ್ ಕುತ್ತಾರ್ ಟೀಕಿಸಿದ್ದಾರೆ. ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಹಾಗೂ ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಯಾವೊಬ್ಬರೂ ಮುಖ್ಯಮಂತ್ರಿಗಳ ಪತ್ರವನ್ನು ಸ್ವಾಗತಿಸದಿರುವುದು ಗಮನಾರ್ಹ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಮೂಲಕ ಮುಖ್ಯಮಂತ್ರಿಗಳ ಪತ್ರವನ್ನು ತಿರಸ್ಕರಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪವೂ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇದರಿಂದ ಕರಾವಳಿ ಭಾಗದ ಅಭಿವೃದ್ಧಿ ಮತ್ತು ಜನರ ನ್ಯಾಯಾಂಗ ಸೌಲಭ್ಯಗಳ ಬಗ್ಗೆ ಬಿಜೆಪಿಯ ನಿಜವಾದ ನಿಲುವು ಬಹಿರಂಗವಾಗಿದೆ ಎಂದು ನೀತಿನ್ ಕುತ್ತಾರ್ ಕಿಡಿಕಾರಿದ್ದಾರೆ.
ಕರಾವಳಿಯ ಜನರಿಗೆ ನ್ಯಾಯಾಂಗ ಸೇವೆಗಳು ಸುಲಭವಾಗಿ ದೊರಕಬೇಕು, ಬೆಂಗಳೂರು ಮೇಲಿನ ಅವಲಂಬನೆ ಕಡಿಮೆಯಾಗಬೇಕು ಮತ್ತು ವಕೀಲರು ಹಾಗೂ ಸಾರ್ವಜನಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗಬೇಕು ಎಂಬ ಉದ್ದೇಶದಿಂದ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಬೇಡಿಕೆ ಮುಂದುವರಿದಿದೆ. ಈ ಹೋರಾಟ ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

