ಕಾರ್ಕಳ, ಮೇ. 16 : ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಗಲೀಜು ಮಾಡಿದ ಪ್ರವಾಸಿಗರ ವಿರುದ್ಧ ಸಾಣೂರು ಗ್ರಾಮ ಪಂಚಾಯತ್ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಕೊಪ್ಪಳದಿಂದ ಎರಡು ವಾಹನಗಳಲ್ಲಿ ಬಂದ ಪ್ರವಾಸಿಗರು ಸಾಣೂರು ಹೆದ್ದಾರಿಯ ಅವಿನಾಶ ನಿವಾಸದ ಸಮೀಪ ಊಟ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ತೆರಳಲು ಯತ್ನಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ಪ್ರವಾಸಿಗರನ್ನು ತಡೆದು ದಂಡ ವಿಧಿಸಲು ಮುಂದಾಗಿದ್ದಾರೆ.ನಮ್ಮ ಊರಲ್ಲಿ ಈ ರೀತಿಯ ಪದ್ಧತಿ ಇಲ್ಲ, ಪಂಚಾಯತ್ ಬೋರ್ಡ್ ಹಾಕಿದ್ದೀರಾ? ಎಂದು ಹೇಳಿ ಪ್ರವಾಸಿಗರು ಆರಂಭದಲ್ಲಿ ದಂಡ ಪಾವತಿಸಲು ನಿರಾಕರಿಸಿದರೆಂದು ತಿಳಿದುಬಂದಿದೆ. ಬಳಿಕ ಅಧಿಕಾರಿಗಳು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಕಾರ್ಕಳ ನಗರ ಠಾಣೆಯ ಸಹಕಾರ ಪಡೆಯಲು ಮುಂದಾದರು.ಈ ಸಂದರ್ಭ ಸ್ಥಳೀಯ ಸಾಮಾಜಿಕ ಮುಖಂಡ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವಾರು ಸಾರ್ವಜನಿಕರು ಪಂಚಾಯತ್ ಆಡಳಿತದ ಕ್ರಮಕ್ಕೆ ಬೆಂಬಲ ಸೂಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.ಇದಾದ ಬಳಿಕ ಪ್ರವಾಸಿಗರು ದಂಡ ತಪ್ಪಿಸಲು ಪ್ರಯತ್ನಿಸಿ ಫುಲ್ಕೇರಿ ಬೈಪಾಸ್ ವೃತ್ತದಿಂದ ಪಡುಬಿದ್ರೆ ಕಡೆಗೆ ವಾಹನ ಚಲಾಯಿಸಿದರೂ, ಪಂಚಾಯತ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದರು.ಪ್ರಕರಣದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಾತ್ರಿ ಸುಮಾರು 8 ಗಂಟೆಗೆ ಉಡುಪಿ ಕಡೆಗೆ ತೆರಳುತ್ತಿದ್ದ ಪ್ರವಾಸಿ ವಾಹನವನ್ನು ತಡೆದು ನಿಲ್ಲಿಸಲಾಯಿತು. ಪಂಚಾಯತ್ ಕಾಯ್ದೆಯ ಅಧಿನಿಯಮದ ಪ್ರಕಾರ ಪ್ರವಾಸಿಗರಿಗೆ ರೂ. 2,000 ದಂಡ ವಿಧಿಸಲಾಗಿದ್ದು, ಸ್ಥಳದಲ್ಲೇ ಸ್ಕ್ಯಾನರ್ ಮೂಲಕ ದಂಡ ಪಾವತಿ ಸ್ವೀಕರಿಸಿ ರಶೀದಿ ನೀಡಲಾಯಿತು.ಸಾಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಪಂಚಾಯತ್ ಆಡಳಿತಾಧಿಕಾರಿ ಹಾಗೂ ಕಾರ್ಕಳ ವಾಣಿಜ್ಯ ಇಲಾಖೆಯ ಸಹಾಯಕ ಆಯುಕ್ತ ರಾಜಾರಾಮ್ ಅವರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಸಾಣೂರು ಗ್ರಾಮ ಪಂಚಾಯತ್ ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು, ಗ್ರಾಮಸ್ಥರು ಮತ್ತು ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

