ಉಡುಪಿ, ಮೇ. 16 : ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಹಾಗೂ ವಾರಂಟ್ ಆರೋಪಿಯನ್ನು ಕಾಪು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಭಿಜಿತ್ (34) ಎಂದು ಗುರುತಿಸಲಾಗಿದ್ದು, ಈತನನ್ನು ಪುಂಜಾಲಕಟ್ಟೆಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.ಆರೋಪಿಯು 2016ರಲ್ಲಿ ಮಲ್ಲಾರು ಪಕೀರಣಕಟ್ಟೆಯ ಬಳಿ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ್ದ. ಈ ಪ್ರಕರಣದ ವಿಚಾರಣೆ ಹಂತದಲ್ಲಿರುವಾಗ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಕಳೆದ ಆರು ವರ್ಷಗಳಿಂದ ಕಾಪು ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.ಸದ್ಯ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಸ್ತುತ ಆತನನ್ನು ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ವಿರುದ್ಧ ಮೈಸೂರಿನ ನರಸಿಂಹರಾಜಪುರ ಮತ್ತು ಬಜಪೆ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆ ಪ್ರಕರಣಗಳಲ್ಲೂ ಈತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯ್ ಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕಾಪು ಎಸ್‌ಐಗಳಾದ ತೇಜಸ್ವಿ ಟಿ.ಐ. ಮತ್ತು ಶುಭಕರ (ತನಿಖಾ ವಿಭಾಗ) ನೇತೃತ್ವದ ತಂಡದಲ್ಲಿದ್ದ ಸಿಬ್ಬಂದಿಗಳಾದ ಮೊಹಮ್ಮದ್ ರಫೀಕ್ ಮತ್ತು ರಘು ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

