ಮಂಗಳೂರು, ಮೇ 15: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಬ್ ಧರಿಸಲು ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಸ್ವಾಗತಿಸಿದ್ದಾರೆ. ಈ ಕ್ರಮವು ಕೇವಲ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಸಂವಿಧಾನ ರಕ್ಷಣೆಯ ದಿಸೆಯಲ್ಲಿ ಇಟ್ಟ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧಾರ್ಮಿಕ ನಂಬಿಕೆಗಳನ್ನು ಪಾಲಿಸುವ ಹಾಗೂ ಸಮಾನ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗಿದ್ದ ಹಿಜಬ್ ವಿವಾದದಿಂದ ಅನೇಕ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಈಗಿನ ಸರ್ಕಾರವು ಆ ತಾರತಮ್ಯವನ್ನು ತೊಡೆದುಹಾಕಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿದೆ,” ಎಂದು ತಿಳಿಸಿದ್ದಾರೆ.
“ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಶಾಲಾ-ಕಾಲೇಜುಗಳು ಪೂರಕವಾಗಿರಬೇಕು. ‘ಸಂವಿಧಾನ ರಕ್ಷಣೆಯೇ ಪ್ರಮುಖ ಗುರಿ’ ಎಂಬ ಧ್ಯೇಯದೊಂದಿಗೆ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಕರಾವಳಿ ಸೇರಿದಂತೆ ರಾಜ್ಯದ ಸಾವಿರಾರು ವಿದ್ಯಾರ್ಥಿನಿಯರು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ,” ಎಂದು ಅವರು ಹೇಳಿದ್ದಾರೆ.
ಹಿಜಬ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅಡ್ಡಿಪಡಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ ನಮ್ಮ ಸರ್ಕಾರವು ಸಂವಿಧಾನವನ್ನು ರಕ್ಷಿಸುವ ಮೂಲಕ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಿದೆ ಎಂದು ಇಬ್ರಾಹಿಂ ನವಾಝ್ ಆರೋಪಿಸಿದ್ದಾರೆ.

