ಮುಂಬೈ, ಮೇ. 13 ;ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಕೆಂದ್ರ ಸರ್ಕಾರ ದಿಢೀರನೇ ಏರಿಕೆ ಮಾಡಿದ ಬೆನ್ನಲ್ಲೇ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಫ್ಯೂಚರ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ಶೇ. 6ರಷ್ಟು ಹೆಚ್ಚಳವಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ಉಂಟಾಗಿದೆ.

ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ.(5.66%) ಏರಿಕೆಯಾಗಿ 1,61,887 ರೂ.ನಲ್ಲಿ ವ್ಯವಹಾರ ನಡೆಸುತ್ತಿದ್ದರೆ 1 ಕೆಜಿ ಬೆಳ್ಳಿ ದರ 1,80,920 ರೂ. (6.36%) ಏರಿಕೆಯಾಗಿ 2,98,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ 3:30ರ ವೇಳೆಗೆ ಈ ದರ ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆಯಿದೆ.ಎಂಸಿಎಕ್ಸ್ ಚಿನ್ನದ ವ್ಯವಹಾರವು ಭೌತಿಕ ಚಿನ್ನದ ಬದಲಿಗೆ, ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನದ ಬೆಲೆ ಏರಿಳಿತಗಳ ಮೇಲೆ ಫ್ಯೂಚರ್ಸ್ ಒಪ್ಪಂದಗಳ ಮೂಲಕ ವ್ಯಾಪಾರ ಮಾಡುವ ವೇದಿಕೆಯಾಗಿದೆ. ಇದು ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಳಿತದಿಂದ ಲಾಭ ಪಡೆಯಲು ಅಥವಾ ಹೆಡ್ಜಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.ಇಲ್ಲಿ ಚಿನ್ನವನ್ನು ಭೌತಿಕವಾಗಿ ಖರೀದಿಸದೇ ಭವಿಷ್ಯದ ದಿನಾಂಕದಂದು ನಿಗದಿತ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸುದ್ದಿಗಳ ಆಧಾರದ ಮೇಲೆ ಬೆಲೆಗಳು ಇಲ್ಲಿ ಏರಿಳಿತವಾಗುತ್ತದೆ.

