ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET (UG) 2026 ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯ ಕುರಿತು ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆ, ಸ್ವತಂತ್ರ ಪರಿಶೀಲನೆ ಹಾಗೂ ಕಾನೂನು ಜಾರಿ ಸಂಸ್ಥೆಗಳ ತನಿಖಾ ವರದಿಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
NTA ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನ್ಯಾಯಸಮ್ಮತ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಬದ್ಧತೆಯ ಭಾಗವಾಗಿ ಮೇ 8ರಂದು ವಿಚಾರಗಳನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲಾಗಿತ್ತು. ಬಳಿಕ ಲಭಿಸಿದ ಮಾಹಿತಿ ಹಾಗೂ ತನಿಖಾ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಪ್ರಸ್ತುತ ಪರೀಕ್ಷಾ ಪ್ರಕ್ರಿಯೆಯನ್ನು ಮುಂದುವರಿಸುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿರುವುದಾಗಿ ಸಂಸ್ಥೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಅನುಮೋದನೆಯೊಂದಿಗೆ NEET (UG) 2026 ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರುಪರೀಕ್ಷೆಯ ದಿನಾಂಕ ಮತ್ತು ಹೊಸ ಅಡ್ಮಿಟ್ ಕಾರ್ಡ್‌ಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು NTA ತಿಳಿಸಿದೆ.
ಇದೇ ವೇಳೆ ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (CBI) ಒಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು NTA ಒದಗಿಸುವುದಾಗಿ ಹೇಳಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಮರುಪರೀಕ್ಷೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೊಂದರೆ ಉಂಟಾಗುವುದನ್ನು ಅರಿತಿದ್ದರೂ, ಪರೀಕ್ಷೆಯನ್ನು ರದ್ದುಪಡಿಸದೇ ಇರುವುದರಿಂದ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ಹಾನಿಯಾಗಬಹುದು ಎಂಬ ಕಾರಣದಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಮೇ 2026ರ ಪರೀಕ್ಷಾ ಚಕ್ರಕ್ಕೆ ಸಂಬಂಧಿಸಿದ ನೋಂದಣಿ ಮಾಹಿತಿ, ಅಭ್ಯರ್ಥಿತ್ವ ಹಾಗೂ ಆಯ್ಕೆ ಮಾಡಿರುವ ಪರೀಕ್ಷಾ ಕೇಂದ್ರಗಳು ಮರುಪರೀಕ್ಷೆಯಿಗೂ ಅನ್ವಯವಾಗಲಿವೆ. ಅಭ್ಯರ್ಥಿಗಳು ಹೊಸದಾಗಿ ನೋಂದಣಿ ಮಾಡಬೇಕಾಗಿಲ್ಲ ಮತ್ತು ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಪಾವತಿಸುವ ಅಗತ್ಯವೂ ಇರುವುದಿಲ್ಲ. ಈಗಾಗಲೇ ಪಾವತಿಸಿರುವ ಶುಲ್ಕವನ್ನು ಹಿಂತಿರುಗಿಸಲಾಗುವುದು ಎಂದು NTA ಘೋಷಿಸಿದೆ.
ಅಭ್ಯರ್ಥಿಗಳು ಮತ್ತು ಪೋಷಕರು ಕೇವಲ ಅಧಿಕೃತ ಮಾಹಿತಿಗಳನ್ನೇ ನಂಬಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪರಿಶೀಲಿಸದ ಸುದ್ದಿಗಳನ್ನು ನಿರ್ಲಕ್ಷಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.
ಸಹಾಯವಾಣಿ:
neet-ug@nta.ac.in | 011-40759000

