ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಸೇರಿದಂತೆ, ಹಲವು ಗ್ರಾಮಗಳಲ್ಲಿ ವಿವಿಧ ರೀತಿಯಲ್ಲಿ ಸರಕಾರಿ ಜಮೀನು ಕಬಳಿಕೆ ನಡೆಯುತ್ತಿದೆ ಎಂಬ ಆರೋಪಗಳು ಹಾಗೂ ವರದಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ವಿಶೇಷವಾಗಿ ಪಾವೂರು, ಹರೇಕಳ, ಅಂಬ್ಲಮೊಗರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕುಮ್ಕಿ ಹಕ್ಕು, ಗೇರು ಜಮೀನು,ಗೋಮಾಳ ಸರ್ಕಾರಿ ಜಾಗ ಖಾಸಗಿಯವರ ಪಾಲಗುತ್ತಿದೆ. ಜೊತೆಗೆ ಮಣ್ಣು ಅಕ್ರಮ ಮಾರಾಟದ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿವೆ. ಈ ಬಗ್ಗೆ ಅಧಿಕಾರಿಗಳು ಶಾಮೀಲಾಗಿರುವ ವರದಿಗಳು ಬರುತ್ತಿದೆ. ಈ ಹಿಂದೆ ಅಂದಿನ ಜಿಲ್ಲಾಧಿಕಾರಿಗಳಾದ ಪೋನ್ನುರಾಜ್ ಅವರು ಮಂಜನಾಡಿ ಪ್ರಕರಣಗಳಲ್ಲಿ 5 ಮಂದಿ ಕಂದಾಯ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಿದ ಉದಾಹರಣೆ ಇದೆ.
ಗ್ರಾಮಗಳಲ್ಲಿ ಕೆಲವರು ನಕಲಿ ದಾಖಲೆಗಳು, ಪ್ರಭಾವ ಅಥವಾ ರಾಜಕೀಯ ಬೆಂಬಲದ ಮೂಲಕ ಸರಕಾರಿ ಜಾಗವನ್ನು ಖಾಸಗಿ ಆಸ್ತಿಯಂತೆ ಮಾರಾಟ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕು.
ನಿಮ್ಮ ಊರಿನಲ್ಲಿ ಯಾರಾದರೂ ಕುಮ್ಕಿ ಹಕ್ಕಿನ ಜಮೀನು, ಸರ್ಕಾರಿ ಜಾಗ ಅಥವಾ ಮಣ್ಣು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಇದ್ದರೆ, ಅದರ ಕುರಿತು ದಾಖಲೆ ಸಮೇತ ದೂರು ನೀಡಬಹುದು. ಸರ್ವೆ ನಂಬರ್, ಗ್ರಾಮದ ಹೆಸರು, ಫೋಟೋ, ವಿಡಿಯೋ ಹಾಗೂ ಲಭ್ಯ ದಾಖಲೆಗಳನ್ನು ಸಂಗ್ರಹಿಸಿ ಕಾನೂನುಬದ್ಧವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವುದು ಸಾರ್ವಜನಿಕರ ಹಕ್ಕು.
ಗ್ರಾಮ ಆಡಳಿತ ಅಧಿಕಾರಿ (VAO), ರೆವಿನ್ಯೂ ಇನ್ಸ್‌ಪೆಕ್ಟರ್, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಅಥವಾ ಸಹಭಾಗಿತ್ವದ ಕುರಿತು ಕೂಡ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಲು ಅವಕಾಶವಿದೆ.
ದೂರು ಸಲ್ಲಿಸಬೇಕಾದ ವಿಳಾಸ:
ಹಿರಿಯ ಸಿವಿಲ್ ನ್ಯಾಯಾಧೀಶರು,
ವಿಲೇಖನಾಧಿಕಾರಿಗಳು,
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ,
೩ನೇ ಮಹಡಿ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಂಗಳೂರು.
ದೂರವಾಣಿ: 080-22239544
ಸರಕಾರಿ ಜಮೀನು ಸಾರ್ವಜನಿಕರ ಆಸ್ತಿ. ಅದನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.

