ಕೊಣಾಜೆ: ಕನಕದಾಸರ ಕೀರ್ತನೆಗಳನ್ನು ವಿವಿಧ ಅಧ್ಯಯನ ಶಿಸ್ತುಗಳ ಮೂಲಕ ನೋಡುವ ಅಗತ್ಯವಿದೆ. ಸಮಾಜಶಾಸ್ತ್ರ, ವಿಜ್ಞಾನ, ಇತಿಹಾಸ, ಆಯುರ್ವೇದ ಮೊದಲಾದ ವಿವಿಧ ಅಧ್ಯಯನ ಶಾಖೆಗಳ ಮೂಲಕ ಗ್ರಹಿಸಲು ಸಾಕಷ್ಟು ಅವಕಾಶವಿದೆ. ಕನಕ ಕೇವಲ ಕವಿ ಮಾತ್ರ ಅಲ್ಲ. 60 ಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಿಸಿದ ಬಗೆಗೆ ಶಾಸನಾಧಾರಗಳಿವೆ. ಕನಕದಾಸರ ಕಾವ್ಯೇತರ ಕಾರ್ಯಗಳ ಬಗೆಗೆ ಹೊಸಶೋಧಗಳು ನಡೆಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹ ನಿರ್ದೇಶಕ ಡಾ.ಅನಿಲಕುಮಾರ ಬೊಮ್ಮಾಘಟ್ಟ ತಿಳಿಸಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಪೀಠ ಮತ್ತು ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ಬುಧವಾರ ನಡೆದ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕನಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್ ಧರ್ಮ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಕಾಲಘಟ್ಟದಲ್ಲಿ ಕನಕದಾಸರಂತಹ ಮಹಾತ್ಮರ ಚಿಂತನೆ, ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಸಮಾಜದಲ್ಲಿ ಕಟ್ಟಡಗಳೊಂದಿಗೆ ಜಾತಿ ಸಂಘಟನೆಗಳೂ ಗಟ್ಟಿಗೊಳ್ಳುತ್ತಿವೆ. ಹೊಸ ಜಾತಿ ಸಮೀಕರಣ ನಡೆಯುತ್ತಿರುವ ಈ ಕಾಲದಲ್ಲಿ ಕನಕರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪೂರಕವಾದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾಂಸರಾದ ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರು
ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಯೇ ಮುಖ್ಯವಾದುದು. ದಾಸ ಸಾಹಿತ್ಯದ ಆತ್ಮ, ಒಳಹುಗಳನ್ನು ಅನ್ವೇಷಿಸಿ ಹೊಸ ಹೊಸ ಆವಿಷ್ಕಾರ, ಅಧ್ಯಯನಗಳು ಹೊರಬರಲಿ. ನಮ್ಮ ವಿಭಿನ್ನ ಯೋಚನೆಗಳ ಮೂಲಕ ದಾಸಸಾಹಿತ್ಯವನ್ನು ನೋಡಲು ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ .ಆರ್, ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆಢಂಬರದ, ಮೌಢ್ಯದ ಭಕ್ತಿಯನ್ನು ವಿರೋಧಿಸಿದ ಕನಕದಾಸರು, ಸಮಾನತೆಯ ಸಮಾಜವನ್ನು ಕಟ್ಟಿದವರು. ಅವರ ಚಿಂತನೆಗಳು ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.
ಆಶಯ ಮಾತುಗಳನ್ನಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಅಭಿವೃದ್ಧಿಯ ಓಟದಲ್ಲಿ ಬಾಹ್ಯ ಧಗೆ ಉಂಟಾಗಿದೆ. ಸ್ವಾರ್ಥ ಅಹಂಕಾರ, ಹಣಮದದಿಂದ ಆಂತರಿಕ ಧಗೆ ಉಂಟಾಗಿದೆ. ಕನಕದಾಸರ ಕೀರ್ತನೆಗಳು ವರ್ತಮಾನದ ಈ ಧಗೆಗೆ ಮಾನವೀಯತೆಯ ತಂಪನ್ನೆರೆಯುವ ಶಕ್ತಿ ಹೊಂದಿದೆ ಎಂದರು
ಪ್ರಾಧ್ಯಾಪಕರು ಹಾಗೂ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಶೋಧನಾ ವಿದ್ಯಾರ್ಥಿನಿ ಸಾಯಿಸುಮ ನಾವಡ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ದುಶ್ಯಂತ್ ಪ್ರಶಸ್ತಿ ಪುರಸ್ಕೃತರ ಹೆಸರು ವಾಚಿಸಿದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ 16 ಅಭ್ಯರ್ಥಿಗಳಿಗೆ ಮತ್ತು ಆರು ತಂಡಗಳಿಗೆ ‘ಕನಕ ಪುರಸ್ಕಾರ ಪ್ರದಾನ ಮಾಡಲಾಯಿತು

