ಚೆನ್ನೈ, ಮೇ. 09 : ತಮಿಳುನಾಡು ರಾಜಕೀಯದಲ್ಲಿ ನಡೆದ ತೀವ್ರ ರಾಜಕೀಯ ಚರ್ಚೆ ಮತ್ತು ಸಂಖ್ಯಾ ಸಮೀಕರಣಗಳ ಬಳಿಕ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ದಾರಿ ಸುಗಮವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಬಹುಮತಕ್ಕೆ ಅಗತ್ಯವಿದ್ದ 118 ಸ್ಥಾನಗಳ ಸಂಖ್ಯೆಯನ್ನು ತಲುಪಲು ಇನ್ನೂ ಕೆಲ ಶಾಸಕರ ಬೆಂಬಲ ಬೇಕಾಗಿತ್ತು. ಇದೀಗ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸಿರುವುದರಿಂದ ಸರ್ಕಾರ ರಚನೆಯ ಬಿಕ್ಕಟ್ಟು ಅಂತ್ಯಗೊಂಡಂತಾಗಿದೆ.

ಟಿವಿಕೆಗೆ ಮೊದಲೇ ಕಾಂಗ್ರೆಸ್ ಬೆಂಬಲ ನೀಡಿತ್ತು. ಇದೀಗ ಸಿಪಿಐ, ಸಿಪಿಐ(ಎಂ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷಗಳೂ ವಿಜಯ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿರುವುದರಿಂದ ಟಿವಿಕೆ ಬಹುಮತದ ಮ್ಯಾಜಿಕ್ ನಂಬರ್ ದಾಟಿದೆ.234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ನೀಡಿದ್ದು, ತಲಾ ಇಬ್ಬರು ಶಾಸಕರಿರುವ ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳು ಕೂಡ ಬೆಂಬಲ ಘೋಷಿಸಿವೆ. ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ ಕೂಡ ವಿಜಯ್ ಬೆಂಬಲಕ್ಕೆ ನಿಂತಿದೆ. ಈ ಎಲ್ಲಾ ಬೆಂಬಲಗಳೊಂದಿಗೆ ಟಿವಿಕೆ ಅಗತ್ಯವಿದ್ದ 118 ಸಂಖ್ಯೆಯನ್ನು ತಲುಪಿದ್ದು, ವಿಜಯ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ.ಇದೀಗ ವಿಜಯ್ ಇಂದು ಸಂಜೆ 6 ಗಂಟೆಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಬೆಂಬಲದ ಪತ್ರಗಳನ್ನು ಸಲ್ಲಿಸಿ ಸರ್ಕಾರ ರಚಿಸಲು ಅಧಿಕೃತವಾಗಿ ಹಕ್ಕು ಮಂಡಿಸುವ ನಿರೀಕ್ಷೆಯಿದೆ. ಜೊತೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕದ ಬಗ್ಗೆ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ.ತಮಿಳುನಾಡು ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಸಜ್ಜಾಗಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣೆಯ ಬಳಿಕ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆ ಇದೀಗ ಬಹುತೇಕ ಅಂತ್ಯಗೊಂಡಿದ್ದು, ವಿಜಯ್ ಅಭಿಮಾನಿಗಳು ಹಾಗೂ ಟಿವಿಕೆ ಕಾರ್ಯಕರ್ತರಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.

