ಮಂಗಳೂರು, ಮೇ. 09: ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್ ಮಂಗಳೂರಿನ ಬಹುವರ್ಷದ ಬೇಡಿಕೆ. ಸದ್ಯ ಬ್ರಿಡ್ಜ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆ ಮೂಲಕ ತಣ್ಣೀರುಬಾವಿ ಬೀಚ್‌ಗೆ ತೆರಳಲು ದಶಕಗಳಿಂದ ಇದ್ದ ಸಂಚಾರ ಸಂಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. 64 ಕೋಟಿ ರೂ ವೆಚ್ಚದಲ್ಲಿ 285 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 30-35 ನಿಮಿಷ ಬೇಕಾಗುವ ಪ್ರಯಾಣದ ಸಮಯ ಈ ಸೇತುವೆ ಮೂಲಕ ಕೇವಲ 10 ನಿಮಿಷಕ್ಕೆ ಕಡಿತಗೊಳ್ಳಲಿದೆ.ತಣ್ಣೀರುಬಾವಿ ಬೀಚ್ ಮಂಗಳೂರು ಸಿಟಿಗೆ ಹೊಂದಿಕೊಂಡಿರುವ ಬೀಚ್ ಆಗಿದೆ. ಮಂಗಳೂರು ಸಿಟಿಯ ಒಂದು ತುದಿಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಈ ಬೀಚ್‌ಗೆ ವಾಹನದಲ್ಲಿ ಹೋಗಬೇಕು ಅಂದರೆ 15 ರಿಂದ 20 ಕಿ.ಮೀ ಸುತ್ತಿಕೊಂಡು ಹೋಗಬೇಕಿತ್ತು. ಆದರೆ ಫೆರಿಯಲ್ಲಿ ಹೋಗೋದಾದರೆ ಕೆಲವೇ ಮೀಟರ್ ಕ್ರಮಿಸಿದರೆ ಸಾಕು.ಇನ್ನು ತಣ್ಣೀರುಬಾವಿ ಸುತ್ತಾಮುತ್ತಾ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಅವರು ಮಂಗಳೂರಿಗೆ ಬರಬೇಕು ಅಂದರೆ ಫೆರಿಯಲ್ಲಿ ಬರಬೇಕಿತ್ತು. ರಸ್ತೆ ಮೂಲಕ ಬರಬೇಕು ಅಂದರೆ ಮತ್ತೆದೇ 15 ಕಿ.ಮೀ ಸುತ್ತಾಟ. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ವಿವಿಧ ರೀತಿಯಲ್ಲಿ ಜನರಿಗೆ ತೊಂದರೆ ಆಗುತ್ತಿತ್ತು. ಆದರೆ ಇದೀಗ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಿದೆ

