ಮಂಗಳೂರು, ಮೇ 08: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ಸಭೆಯು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ನವಾಝ್, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದು, ಆ ಯೋಜನೆಗಳ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.


ವಿರೋಧ ಪಕ್ಷಗಳು ಹರಡುತ್ತಿರುವ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾರ್ಯಕರ್ತರು ಸದಾ ಸನ್ನದ್ಧರಾಗಿರಬೇಕು. ವಾಸ್ತವಾಂಶಗಳನ್ನು ಜನರ ಮುಂದಿಡುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ದೊರೆಯುತ್ತಿರುವ ನೆರವು ಹಾಗೂ ಮುಂದಿನ ದಿನಗಳಲ್ಲಿ ಯುವ ಸಬಲೀಕರಣಕ್ಕಾಗಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು.
ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದ ತಂಡವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಪ್ರತಿ ಬೂತ್ ಮಟ್ಟದಲ್ಲೂ ಡಿಜಿಟಲ್ ಯೂಥ್ ಸಂವಹನವನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು.
“ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಫೋನ್ ಕೇವಲ ಸಂವಹನ ಸಾಧನವಲ್ಲ; ಅದು ಬದಲಾವಣೆಯ ಅಸ್ತ್ರವಾಗಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ನೈಜ ವಿಡಿಯೋಗಳು ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷಗಳ ಸುಳ್ಳಿನ ಕೋಟೆಯನ್ನು ಧ್ವಂಸ ಮಾಡಬೇಕಿದೆ,” ಎಂದು ಇಬ್ರಾಹಿಂ ನವಾಝ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಯೋಜಕರಾದ ರಿತೇಶ್ ಅಂಚನ್, ಸಗರ್ ಕಟೀಲ್ ಹಾಗೂ ಶ್ರೀವತ್ಸ, ಇಕ್ಬಲ್, ಫಯಾಜ್, ಶಾಫಿಕ್, ಶಾಕಿರ್ ಅರಫಾ, ಅನ್ಸರ್ ಮತ್ತು ಅಬ್ದುಲ್ ಅಕ್ಮಲ್ ಉಪಸ್ಥಿತರಿದ್ದರು.

